

ನವದೆಹಲಿ: ದೇಶದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ಇದರಿಂದಾಗಿ ಜನವರಿ 13ರಂದು ನಿಗದಿಯಂತೆ ಟೂರ್ನಿ ಆರಂಭಗೊಳ್ಳುವುದಿಲ್ಲ. ಜತೆಗೆ ಸಿಕೆ ನಾಯ್ಡು ಟ್ರೋಫಿ ಸಹಿತ ಎಲ್ಲ ದೇಶೀಯ ಕ್ರಿಕೆಟ್ ಟೂರ್ನಿಗಳನ್ನೂ ಮುಂದೂಡಲಾಗಿದೆ.
ಕರೊನಾ ಹಾವಳಿಯಿಂದಾಗಿ ಕಳೆದ ವರ್ಷದ ರಣಜಿ ಟ್ರೋಫಿ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ಈ ಬಾರಿ ಬಯೋಬಬಲ್‌ನಲ್ಲಿ ಟೂರ್ನಿ ಆಡಿಸಲು ಯೋಜನೆ ಹಾಕಿಕೊಂಡಿದ್ದರೂ, ಕೆಲ ಆಟಗಾರರೂ ಸೋಂಕಿತರಾಗಿದ್ದು ಹಿನ್ನಡೆ ತಂದಿದೆ.
ಸಿಕೆ ನಾಯ್ಡು ಟ್ರೋಫಿ ಟೂರ್ನಿ ಕೂಡ ಇದೇ ತಿಂಗಳು ಆರಂಭಗೊಳ್ಳಬೇಕಿದ್ದರೆ, ಮಹಿಳೆಯರ ಟಿ20 ಲೀಗ್ ಮುಂದಿನ ತಿಂಗಳು ಶುರುವಾಗಬೇಕಾಗಿತ್ತು. ಆಟಗಾರರ ಆರೋಗ್ಯದ ಜತೆಗೆ ಯಾವುದೇ ರಾಜಿ ಮಾಡಿಕೊಳ್ಳಲು ನಾವು ಸಿದ್ಧರಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಟೂರ್ನಿ ಆಯೋಜಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಹಾಲಿ ದೇಶೀಯ ಕ್ರಿಕೆಟ್ ಋತುವಿನಲ್ಲಿ ಈಗಾಗಲೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗಳು ಯಶಸ್ವಿಯಾಗಿ ಆಯೋಜನೆಗೊಂಡಿದ್ದವು. ಆದರೆ ಇದೀಗ ದೇಶದ ಪ್ರಮುಖ ನಗರಗಳಲ್ಲಿ ಕರೊನಾ ಪ್ರಕರಣಗಳು ದಿಢೀರ್ ಏರಿಕೆ ಕಂಡಿರುವುದು ರಣಜಿ ಟ್ರೋಫಿಗೆ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. ರಣಜಿ ಟ್ರೋಫಿಯ ಲೀಗ್ ಪಂದ್ಯಗಳು ಅಹಮದಾಬಾದ್, ಬೆಂಗಳೂರು, ಕೋಲ್ಕತ, ಚೆನ್ನೈ, ತಿರುವನಂತಪುರ ಮತ್ತು ಮುಂಬೈನಲ್ಲಿ ನಿಗದಿಯಾಗಿದ್ದವು.