ಏಷ್ಯಾಕಪ್​ಗೆ ಬಿಸಿಸಿಐ ಆಕ್ಷೇಪ

BCCI
Published on

ನವದೆಹಲಿ: ಈ ವರ್ಷದ ಏಷ್ಯಾಕಪ್ ಟೂರ್ನಿಯನ್ನು ಶ್ರೀಲಂಕಾದಲ್ಲಿ ಆಯೋಜಿಸುವ ಬಗ್ಗೆ ವರದಿಗಳು ಬರುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಬಿಸಿಸಿಐ, ಟೂರ್ನಿ ಆಯೋಜನೆಗೆ ಆಕ್ಷೇಪವನ್ನೂ ಸೂಚಿಸಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆ ಕಳೆದ ವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದಿತ್ತು. ಆದರೆ ಸಭೆಯಲ್ಲಿ ಏಷ್ಯಾಕಪ್ ಟೂರ್ನಿಯ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಆದರೂ, ಈ ವರ್ಷದ ಟೂರ್ನಿಯ ಅತಿಥ್ಯವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ವಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಮ್ಮತಿಸಿದೆ ಎಂಬ ವರದಿಗಳು ಬರುತ್ತಿವೆ.

ಮೂಲ ವೇಳಾಪಟ್ಟಿಯ ಪ್ರಕಾರ ಈ ವರ್ಷದ ಏಷ್ಯಾಕಪ್ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕಿದೆ. ಆದರೆ ಪಾಕಿಸ್ತಾನದಲ್ಲಿ ಆಡಲು ಭಾರತ ನಿರಾಕರಿಸಿರುವುದರಿಂದ ಬೇರೊಂದು ಸ್ಥಳದಲ್ಲಿ ಟೂರ್ನಿಗೆ ಆತಿಥ್ಯ ವಹಿಸಿಕೊಳ್ಳಬೇಕಾಗಿದೆ. ಈ ವರ್ಷದ ಟೂರ್ನಿಯನ್ನು ಶ್ರೀಲಂಕಾದಲ್ಲಿ ನಡೆಸಲು ಪಿಸಿಬಿ ಒಪ್ಪಿಕೊಂಡಿದೆ ಎಂದು ಲಂಕಾ ಮಂಡಳಿಯ ಮುಖ್ಯಸ್ಥ ಶಮ್ಮಿ ಸಿಲ್ವಾ ಎಸಿಸಿ ಸಭೆಯ ಬಳಿಕ ಹೇಳಿಕೊಂಡಿದ್ದರು.

ಏಷ್ಯಾಕಪ್ ಟೂರ್ನಿಯ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ. ಇಂಥ ವರದಿಗಳು ಎಲ್ಲಿಂದ ಬರುತ್ತಿವೆ ಎಂದು ತಿಳಿದಿಲ್ಲ. ಈ ಬಗ್ಗೆ ಸ್ಪಷ್ಟನೆಗಳನ್ನು ನೀಡಿ ಮಂಡಳಿಗೆ ಸಾಕಾಗಿದೆ. ಭಾರತ ತಂಡ ಶ್ರೀಲಂಕಾ, ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಈ ಬಗ್ಗೆ ಬಿಸಿಸಿಐ ಪ್ರಕಟಣೆಯನ್ನು ನೀಡಿ ಸ್ಪಷ್ಟಪಡಿಸಬೇಕಾಯಿತು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕತಾರ್​​ನಲ್ಲಿ ಸಂಕಷ್ಟದಲ್ಲಿದ್ದ 180 ಭಾರತೀಯರು ದೇಶಕ್ಕೆ ಮರಳಲು ಕರ್ನಾಟಕ ಸಂಘದ ಸಹಕಾರ…

ಈ ವರ್ಷ ಅಕ್ಟೋಬರ್-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯ ಭವಿಷ್ಯವನ್ನು ಐಸಿಸಿ ಶೀಘ್ರದಲ್ಲೇ ನಿರ್ಧರಿಸುವ ನಿರೀಕ್ಷೆ ಇದೆ. ಒಂದು ವೇಳೆ ವಿಶ್ವಕಪ್ ಮುಂದೂಡಿಕೆಯಾದರೆ, ಟಿ20 ಮಾದರಿಯಲ್ಲಿ ನಡೆಯಬೇಕಾಗಿರುವ ಈ ವರ್ಷದ ಏಷ್ಯಾಕಪ್ ಕೂಡ ಮುಂದೂಡಿಕೆಯಾಗುವುದು ನಿಶ್ಚಿತವೆನಿಸಿದೆ. ಇಲ್ಲದಿದ್ದರೆ ವಿಶ್ವಕಪ್​ಗೆ ಪೂರ್ವಾಭ್ಯಾಸದಂತೆ ಏಷ್ಯಾಕಪ್ ನಡೆಯಲಿದೆ ಎನ್ನಲಾಗಿದೆ. ಇದನ್ನೂ ಓದಿ: ಸುಶಾಂತ್ ಸಾವಿನ ಬಗ್ಗೆ ಧೋನಿ ಮೌನವೇಕೆ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net