

ನವದೆಹಲಿ: ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ರಣಜಿ ಟ್ರೋಫಿ ಟೂರ್ನಿಯ ಸ್ವರೂಪವನ್ನು ಬದಲಾವಣೆ ಮಾಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಹೊಸ ಪ್ರಸ್ತಾಪದ ಪ್ರಕಾರ, ಎಲೈಟ್ ವಿಭಾಗದಲ್ಲಿ ತಂಡಗಳನ್ನು 5 ಗುಂಪುಗಳಲ್ಲಿ ವಿಂಗಡಿಸಲಾಗುವುದು. ಇದರಿಂದ ಪ್ರತಿ ಗುಂಪಿನಲ್ಲಿ 6 ತಂಡಗಳಿರುತ್ತವೆ. ಪ್ಲೇಟ್ ಗುಂಪಿನಲ್ಲಿ 8 ತಂಡಗಳಿರುತ್ತವೆ. ಇದರಿಂದಾಗಿ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆ 169ರಿಂದ 113ಕ್ಕೆ ಇಳಿಕೆಯಾಗಲಿವೆ.
ಟೂರ್ನಿಯ ಹಾಲಿ ಸ್ವರೂಪದ ಅನ್ವಯ ಎಲೈಟ್ ಎ ಮತ್ತು ಬಿ ಗುಂಪಿನಲ್ಲಿ ತಲಾ 9 ತಂಡಗಳಿದ್ದರೆ, ಸಿ ಗುಂಪಿನಲ್ಲಿ 10 ತಂಡಗಳಿವೆ. ಪ್ಲೇಟ್ ಗುಂಪಿನಲ್ಲಿ 10 ತಂಡಗಳಿವೆ. ಹೊಸ ಪ್ರಸ್ತಾಪದ ಪ್ರಕಾರ ಹಾಲಿ ಪ್ಲೇಟ್ ಗುಂಪಿನಲ್ಲಿರುವ 10 ತಂಡಗಳಲ್ಲಿ ಪೈಕಿ ಅಗ್ರ 2 ತಂಡಗಳಿಗೆ ಎಲೈಟ್ ವಿಭಾಗಕ್ಕೆ ಬಡ್ತಿ ನೀಡಲಾಗುತ್ತದೆ. ಹೊಸ ಸ್ವರೂಪದ ಅನ್ವಯ 5 ಎಲೈಟ್ ಗುಂಪಿನಿಂದ ಅಗ್ರ ತಂಡಗಳು ಕ್ವಾರ್ಟರ್ಫೈನಲ್ಗೇರಲಿವೆ. ಉಳಿದ 3 ಕ್ವಾರ್ಟರ್ಫೈನಲ್ ಸ್ಥಾನಗಳಿಗಾಗಿ ಎಲೈಟ್ ಗುಂಪಿನಲ್ಲಿ 2ನೇ ಸ್ಥಾನ ಪಡೆದ 5 ತಂಡಗಳು ಮತ್ತು ಪ್ಲೇಟ್ ಗುಂಪಿನ ಅಗ್ರ ತಂಡ ಪ್ಲೇಆಫ್ನಲ್ಲಿ ಸೆಣಸಾಡಲಿವೆ. ಕರೊನಾ ವೈರಸ್ ಹಾವಳಿ ಶುರುವಾಗುವುದಕ್ಕೆ ಮುನ್ನವೇ ಈ ಹೊಸ ಪ್ರಸ್ತಾಪವನ್ನು ಬಿಸಿಸಿಐ ಮುಂದಿಡಲಾಗಿತ್ತು ಎನ್ನಲಾಗಿದೆ. ಈಗ ಕರೊನಾ ಭೀತಿಯ ನಡುವೆ ಕಿರಿದಾದ ಈ ಸ್ವರೂಪ ರಣಜಿ ಟ್ರೋಫಿಗೆ ಹೆಚ್ಚು ಹೊಂದಿಕೆಯಾಗುತ್ತಿದೆ.
ಆಟಗಾರರಿಂದ ವಿರೋಧ ಸಾಧ್ಯತೆ: ರಣಜಿ ಟ್ರೋಫಿಯ ಹೊಸ ಸ್ವರೂಪದಿಂದ ವೇತನ ಪ್ರಮಾಣ ಕಡಿಮೆಯಾಗುವುದರಿಂದ ಇದಕ್ಕೆ ಆಟಗಾರರಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಹೊಸ ಸ್ವರೂಪದ ಅನ್ವಯ ಪ್ರತಿ ತಂಡಕ್ಕೆ ಲೀಗ್ ಹಂತದಲ್ಲಿ ಗರಿಷ್ಠ 5 ಪಂದ್ಯಗಳನ್ನಷ್ಟೇ ಆಡುವ ಅವಕಾಶ ಸಿಗಲಿದೆ. -ಪಿಟಿಐ/ಏಜೆನ್ಸೀಸ್