ಇಂದು ಬಿಸಿಸಿಐ ಮಹತ್ವದ ಸಭೆ; ಐಪಿಎಲ್​, ಭಾರತ ತಂಡ, ದೇಶೀಯ ಕ್ರಿಕೆಟ್​ ಭವಿಷ್ಯ ನಿರ್ಧಾರ ನಿರೀಕ್ಷೆ

bcci logo
Published on

ನವದೆಹಲಿ: ಭಾರತೀಯ ಕ್ರಿಕೆಟ್​ ಮಂಡಳಿಯ ಪ್ರಭಾವಿ ಅಪೆಕ್ಸ್​ ಕೌನ್ಸಿಲ್​ನ ಮಹತ್ವದ ಸಭೆ ಶುಕ್ರವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಯಲಿದೆ. ಐಪಿಎಲ್​ ಟೂನಿರ್ಯ ಭವಿಷ್ಯದ ಬಗ್ಗೆ ಚರ್ಚಿಸುವುದು ಸಭೆಯ ಪ್ರಮುಖ ಅಂಶವಾಗಿದ್ದರೆ, ಟೀಮ್​ ಇಂಡಿಯಾದ ಫ್ಯೂಚರ್​ ಟೂರ್ಸ್​-ಪ್ರೋಗ್ರಾಂ (ಎಫ್​ಟಿಪಿ) ಬಗ್ಗೆಯೂ ಚರ್ಚೆ ನಡೆಯಲಿದೆ. ಜತೆಗೆ ದೇಶೀಯ ಕ್ರಿಕೆಟ್​ ವೇಳಾಪಟ್ಟಿಯನ್ನೂ ರೂಪಿಸುವ ನಿರೀಕ್ಷೆ ಇದೆ. ಸಭೆಯಲ್ಲಿ ಒಟ್ಟು 11 ಅಂಶಗಳ ಚರ್ಚೆ ನಡೆಯಲಿದೆ.

ದೇಶದಲ್ಲಿ ಈಗ ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಐಪಿಎಲ್​ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವುದು ಅನಿವಾರ್ಯದಂತೆ ಕಾಣಿಸುತ್ತಿದೆ. ಹೀಗಾಗಿ ಐಪಿಎಲ್​ ಟೂರ್ನಿಯ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.

ಟೀಮ್​ ಇಂಡಿಯಾದ ಶ್ರೀಲಂಕಾ ಮತ್ತು ಜಿಂಬಾಬ್ವೆ ಪ್ರವಾಸಗಳು ಈಗಾಗಲೆ ರದ್ದುಗೊಂಡಿದ್ದರೆ, ದಕ್ಷಿಣ ಆಫ್ರಿಕಾ ಪ್ರವಾಸವೂ ನಡೆಯುವ ಸಾಧ್ಯತೆ ಕ್ಷೀಣವಾಗಿದೆ. ನಂತರ ತವರಿನಲ್ಲಿ ನಿಗದಿಯಾಗಿರುವ ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ ಸರಣಿಯೂ ಬಹುತೇಕ ರದ್ದುಗೊಂಡಿದ್ದು, ಈ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡುವುದಷ್ಟೇ ಬಾಕಿ ಇದೆ. ಹೀಗಾಗಿ ಟೀಮ್​ ಇಂಡಿಯಾ ಹೊಸ ಎಫ್​ಟಿಪಿ ಸಿದ್ಧಪಡಿಸುವುದು ಅಗತ್ಯವಾಗಿದೆ. ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ ಸರಣಿ ಮುಂದಿನ ವರ್ಷ ಫೆಬ್ರವರಿಗೆ ಮರುನಿಗದಿಯಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಇಂಗ್ಲೆಂಡ್​ ತಂಡ ಟೆಸ್ಟ್​ ಸರಣಿಗಾಗಿ ಭಾರತಕ್ಕೆ ಆಗಮಿಸಬೇಕಿದೆ.

ಮುಂದಿನ ಸೋಮವಾರ ಐಸಿಸಿ ಮಂಡಳಿ ಸಭೆ ನಿಗದಿಯಾಗಿದೆ. ಹೀಗಾಗಿ ಅದಕ್ಕೆ ಮುನ್ನ, 2021ರಲ್ಲಿ ಭಾರತದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್​ಯ ತೆರಿಗೆ ವಿನಾಯಿತಿ ಬಿಕ್ಕಟ್ಟಿನ ಬಗ್ಗೆಯೂ ಚರ್ಚೆ ನಡೆಯಲಿದೆ. ಬಿಸಿಸಿಐ ಈ ಬಗ್ಗೆ ಕೇಂದ್ರ ಸರ್ಕಾರ ಜತೆಗೆ ಇನ್ನಷ್ಟೇ ಮಾತುಕತೆ ನಡೆಸಬೇಕಾಗಿದೆ. ಸದ್ಯಕ್ಕೆ ಐಸಿಸಿ, ಸರ್ಕಾರದ ಅನುಮತಿ ಪಡೆದುಕೊಳ್ಳಲು ಬಿಸಿಸಿಐಗೆ ಡಿಸೆಂಬರ್​ವರೆಗೂ ಸಮಯಾವಕಾಶ ನೀಡಿದೆ.

ಟೀಮ್​ ಇಂಡಿಯಾದ ಜೆರ್ಸಿ ಪ್ರಾಯೋಜಕನಾಗಿರುವ ನೈಕಿ ಕಂಪನಿ ಜತೆಗಿನ ಒಪ್ಪಂದ ಮುಗಿಯುತ್ತ ಬಂದಿದ್ದು, ಹೊಸ ಪ್ರಾಯೋಜಕರನ್ನು ಆಹ್ವಾನಿಸಲು ಟೆಂಡರ್​ ಪ್ರಕ್ರಿಯೆಯ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ದೇಶೀಯ ಕ್ರಿಕೆಟ್​ ಸ್ವರೂಪ ನಿರ್ಧಾರ

ಹಾಲಿ ಪರಿಸ್ಥಿತಿಯನ್ನು ಗಮನಿಸಿದಾಗ 2020-21ರ ಸಾಲಿನ ದೇಶೀಯ ಕ್ರಿಕೆಟ್​ ಚಟುವಟಿಕೆಗಳು ನಿಗದಿಯಂತೆ ನಡೆಯುವುದು ಅನುಮಾನವೆನಿಸಿದೆ. ಹೀಗಾಗಿ ಮುಂದಿನ ಋತುವಿನ ಸ್ವರೂಪವನ್ನು ಬಿಸಿಸಿಐ ಕಿರಿದಾಗಿಸುವ ನಿರೀಕ್ಷೆ ಇದೆ. ಸುರಕ್ಷಿತ ಪ್ರಯಾಣ ಸಾಧ್ಯವಾಗುವವರೆಗೆ ದೇಶೀಯ ಪಂದ್ಯಗಳನ್ನು ಆಯೋಜಿಸುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಈಗಾಗಲೆ ಸ್ಪಷ್ಟಪಡಿಸಿದ್ದಾರೆ.

ಸಭೆಯ 11 ಅಜೆಂಡಾಗಳು:

1. ಐಪಿಎಲ್​-ಮುಂದಿನ ಹೆಜ್ಜೆಗಳು.

2. ದೇಶೀಯ ಕ್ರಿಕೆಟ್​ ವೇಳಾಪಟ್ಟಿ.

3. ಎಫ್​ಟಿಪಿ ಮರುನಿಗದಿ, 2021ರ ಫೆಬ್ರವರಿಯ ಇಂಗ್ಲೆಂಡ್​ ವಿರುದ್ಧ ತವರಿನ ಸರಣಿ ವೇಳಾಪಟ್ಟಿ.

4. ಭಾರತದಲ್ಲಿ ಟಿ20 ವಿಶ್ವಕಪ್​ ಆಯೋಜನೆಗೆ ತೆರಿಗೆ ವಿನಾಯಿತಿ ಪ್ರಮಾಣಪತ್ರ ಕಡ್ಡಾಯ.

5. ಬೆಂಗಳೂರಿನ ಎನ್​ಸಿಎ ವ್ಯವಸ್ಥೆಗಳು.

6. ಬಿಸಿಸಿಐ ಮತ್ತು ಐಪಿಎಲ್​ ಡಿಜಿಟಲ್​ ಹಕ್ಕುಗಳ ವಿಸ್ತರಣೆ.

7. ಬಿಹಾರ ಕ್ರಿಕೆಟ್​ ಸಂಸ್ಥೆ ಆಡಳಿತಾತ್ಮಕ ಬಿಕ್ಕಟ್ಟು.

8. ಬಿಸಿಸಿಐಗೆ ಹೊಸ ಸಿಬ್ಬಂದಿ ನೇಮಕ.

9. ರಾಹುಲ್​ ಜೋಹ್ರಿ ರಾಜೀನಾಮೆ ಬಳಿಕ ಹೊಸ ಸಿಇಒ ನೇಮಕ ಪ್ರಕ್ರಿಯೆ.

10. ಈಶಾನ್ಯ ರಾಜ್ಯಗಳಿಗೆ ಹಣ ಪಾವತಿ.

11. ಟೀಮ್​ ಇಂಡಿಯಾ ಜೆರ್ಸಿ ಹಕ್ಕಿನ ಟೆಂಡರ್​ ಪ್ರಕ್ರಿಯೆ.

ಬಿಸಿಸಿಐ ಅಪೆಕ್ಸ್​ ಕೌನ್ಸಿಲ್​ನ 9 ಸದಸ್ಯರು: ಸೌರವ್​ ಗಂಗೂಲಿ (ಅಧ್ಯಕ್ಷ), ಜಯ್​ ಷಾ (ಕಾರ್ಯದರ್ಶಿ), ಮಹಿಮ್​ ವರ್ಮ (ಉಪಾಧ್ಯ), ಅರುಣ್​ ಧುಮಾಲ್​ (ಖಜಾಂಚಿ), ಜಯೇಶ್​ ಜಾರ್ಜ್​ (ಜಂಟಿ ಕಾರ್ಯದರ್ಶಿ), ರಾಜ್ಯ ಕ್ರಿಕೆಟ್​ ಸಂಸ್ಥೆಗಳ ಪ್ರತಿನಿಧಿ, ಅಂಶುಮಾನ್​ ಗಾಯಕ್ವಾಡ್​ (ಐಸಿಎ ಪ್ರತಿನಿಧಿ), ಶಾಂತಾ ರಂಗಸ್ವಾಮಿ (ಐಸಿಎ ಮಹಿಳಾ ಪ್ರತಿನಿಧಿ), ಅಲ್ಕಾ ರೆಹನಿ ಭಾರದ್ವಾಜ್​ (ಸಿಎಜಿ ಪ್ರತಿನಿಧಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net