

ನವದೆಹಲಿ: ಒಂದೇ ವಲಯದಿಂದ ಇಬ್ಬರು ಪ್ರತಿನಿಧಿಗಳು ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿರುವುದನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ, ಓರ್ವ ಆಯ್ಕೆಗಾರ ಹುದ್ದೆಗೆ ಸೋಮವಾರ ಅರ್ಜಿ ಆಹ್ವಾನಿಸಿದೆ. ಈ ಸಂಬಂಧ ಬಿಸಿಸಿಐ ವೆಬ್ಸೈಟ್ನಲ್ಲಿ ಜಾಹೀರಾತು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಕನಿಷ್ಠ 7 ಟೆಸ್ಟ್ ಅಥವಾ 30 ಪ್ರಥಮ ದರ್ಜೆ ಪಂದ್ಯ ಆಡಿರಬೇಕು ಎಂದು ತಿಳಿಸಲಾಗಿದೆ. ಜತೆಗೆ 10 ಏಕದಿನ ಅಥವಾ 20 ಪ್ರಥಮ ದರ್ಜೆ ಪಂದ್ಯ ಆಡಿದ ಅನುಭವವಿದ್ದರೂ ಪರಿಗಣಿಸಲಾಗುವುದು ಎಂದು ತಿಳಿಸಿದೆ.
ಪಶ್ಚಿಮ ವಲಯದ ಅಜಿತ್ ಅಗರ್ಕರ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅದೇ ವಲಯದ ಮತ್ತೋರ್ವ ಪ್ರತಿನಿಧಿಯಾಗಿ ಸಲಿಲ್ ಅಂಕೋಲ ಆಯ್ಕೆ ಸಮಿತಿಯಲ್ಲಿರುವುದಕ್ಕೆ ಬಿಸಿಸಿಐ ಸಹಮತವಿಲ್ಲ. ಇದರಿಂದ ಅವರ ಸ್ಥಾನದಲ್ಲಿ ಉತ್ತರ ವಲಯದ ಆಯ್ಕೆಗಾರನನ್ನು ಸೇರಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ. ಅರ್ಜಿ ಸಲ್ಲಿಸಲು ಜನವರಿ 25 ಕೊನೇ ದಿನವಾಗಿದೆ.
ಐವರು ಸದಸ್ಯರ ಆಯ್ಕೆ ಸಮಿತಿಯಲ್ಲಿ ಎಸ್. ಶರತ್ (ದಕ್ಷಿಣ), ಎಸ್ಎಸ್ ದಾಸ್ (ಕೇಂದ್ರ) ಮತ್ತು ಸುಬ್ರತೊ ಬ್ಯಾನರ್ಜಿ (ಪೂರ್ವ) ಇತರ ಮೂವರು ಆಯ್ಕೆಗಾರರಾಗಿದ್ದಾರೆ. ಅಗರ್ಕರ್ ಹೊರತಾಗಿ ಇತರ ನಾಲ್ವರು ಆಯ್ಕೆಗಾರರು ಕಳೆದ ಡಿಸೆಂಬರ್ 23ಕ್ಕೆ ಒಂದು ವರ್ಷದ ಅವಧಿ ಪೂರೈಸಿದ್ದರು ಮತ್ತು ಅವರಿಗೆ ಒಂದು ವರ್ಷದ ಅವಧಿ ವಿಸ್ತರಣೆಯನ್ನು ನೀಡಲಾಗಿದೆ.
ತಾಂತ್ರಿಕವಾಗಿ, ಆಯ್ಕೆ ಸಮಿತಿಯಲ್ಲಿ ಒಂದೇ ವಲಯದ ಇಬ್ಬರು ಸದಸ್ಯರು ಇರಬಾರದು ಎಂಬ ರ್ನಿಬಂಧವಿಲ್ಲದಿದ್ದರೂ, ಒಂದು ವಲಯದಿಂದ ಒಬ್ಬರೇ ಇರಬೇಕೆಂಬ ಪರಿಪಾಠವನ್ನು ಬಿಸಿಸಿಐ ಪಾಲಿಸುತ್ತ ಬಂದಿದೆ. ಆದರೆ, 2023ರ ಫೆಬ್ರವರಿಯಲ್ಲಿ ಖಾಸಗಿ ಟಿವಿ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಬಳಿಕ ಪದತ್ಯಾಗ ಮಾಡಿದಾಗ ಬಿಸಿಸಿಐ, ಅವರ ಬದಲಿಗೆ ಉತ್ತರ ವಲಯದ ಆಯ್ಕೆಗಾರರನ್ನು ಆರಿಸದೆ, ಅಜಿತ್ ಅಗರ್ಕರ್ರನ್ನು ನೇಮಿಸಿತ್ತು. ಈ ಬಾರಿ ಅಗರ್ಕರ್ರನ್ನು ಉಳಿಸಿಕೊಂಡು ಸಲಿಲ್ ಅಂಕೋಲರನ್ನು ಕೈಬಿಡಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಹೊಸ ಆಯ್ಕೆಗಾರರಾಗಿ ಉತ್ತರ ವಲಯದಿಂದಲೇ ಮಾಜಿ ಕ್ರಿಕೆಟಿಗರೊಬ್ಬರು ನೇಮಕಗೊಳ್ಳುವ ನಿರೀಕ್ಷೆ ಇದೆ.
ಆಯ್ಕೆಗೆ ಸಮಯ ಮಿತಿ ಇಲ್ಲ
ಹೊಸ ಆಯ್ಕೆಗಾರನ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಬಿಸಿಸಿಐ ಸಮಯ ಮಿತಿ ನಿಗದಿಪಡಿಸಿಲ್ಲ. ಯಾಕೆಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ 2 ಟೆಸ್ಟ್ಗಳಿಗೆ ಈಗಾಗಲೆ ತಂಡವನ್ನು ಆರಿಸಲಾಗಿದ್ದು, ಕೊನೇ 3 ಟೆಸ್ಟ್ಗಳಿಗೆ ಅದರಲ್ಲೇ ಸಣ್ಣ ಪುಟ್ಟ ಬದಲಾವಣೆಯಷ್ಟೇ ಆಗಬಹುದು. ನಂತರ ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ವರೆಗೆ ಬೇರೆ ಯಾವುದೇ ತಂಡ ಆಯ್ಕೆ ಒತ್ತಡವಿಲ್ಲ. ಹೀಗಾಗಿ ಏಪ್ರಿಲ್ನಲ್ಲಿ ಐಪಿಎಲ್ ವೇಳೆ ಪ್ರಕ್ರಿಯೆ ಪೂರ್ಣಗೊಳಿಸುವ ನಿರೀಕ್ಷೆ ಇದೆ.