ಶುಭಮಾನ್​ ಗಿಲ್​ ಡಿಕ್ಲೇರ್​ನಿಂದ ಬಿಸಿಸಿಐಗೆ ಕಾನೂನು ಸಂಕಷ್ಟ!: 250 ಕೋಟಿ ರೂ. ನಷ್ಟದ ಭೀತಿ

New Project (4)
Published on

ರ್ಬಮಿಂಗ್​ಹ್ಯಾಂ: ಭಾರತ ತಂಡದ ಮುನ್ನಡೆ 600ರ ಗಡಿ ದಾಟಿದ ಬಳಿಕ ನಾಯಕ ಶುಭಮಾನ್​ ಗಿಲ್​ ಡ್ರೆಸ್ಸಿಂಗ್​ ರೂಮ್​ನಿಂದ ಹೊರಬಂದು ಬ್ಯಾಟರ್​ಗಳಿಗೆ ವಾಪಸ್​ ಬರುವಂತೆ ಸನ್ನೆ ಮಾಡುವ ಮೂಲಕ ಡಿಕ್ಲೇರ್​ ಘೋಷಿಸಿದ್ದರು. ಈ ವೇಳೆ ಗಿಲ್​ "ನೈಕಿ' ಕಂಪನಿಯ ಕಪ್ಪು ಬಣ್ಣದ ಮೈಗಂಟಿದ ಮೇಲಂಗಿ ಧರಿಸಿದ್ದರು. ಇದು ಈಗ ಬಿಸಿಸಿಐಗೆ ಕಾನೂನು ಸಂಕಷ್ಟ ಮತ್ತು ಸುಮಾರು 250 ಕೋಟಿ ರೂ. ನಷ್ಟ ತರುವ ಭೀತಿ ಸೃಷ್ಟಿಸಿದೆ! ಯಾಕೆಂದರೆ ಬಿಸಿಸಿಐ ಪ್ರಸಕ್ತ "ಅಡಿಡಾಸ್​' ಕಂಪನಿಯೊಂದಿಗೆ ಟೀಮ್​ ಇಂಡಿಯಾದ ಕಿಟ್​ ಪ್ರಾಯೋಜಕತ್ವವನ್ನು ಹೊಂದಿದೆ.

2028ರ ಮಾರ್ಚ್​ವರೆಗಿನ ಈ ಒಪ್ಪಂದದನ್ವಯ ಜರ್ಮನಿ ಮೂಲದ ​ "ಅಡಿಡಾಸ್​' 250 ಕೋಟಿ ರೂ. ಅಂದರೆ ಪ್ರತಿ ಪಂದ್ಯಕ್ಕೆ 75 ಲಕ್ಷ ರೂ. ಪಾವತಿಸಬೇಕಿದೆ. ಆದರೆ ಅಡಿಡಾಸ್​ನ ಎದುರಾಳಿ ಕಂಪನಿ "ನೈಕಿ'ಯ ಜೆರ್ಸಿ ಧರಿಸಿ ಗಿಲ್​ ಪಂದ್ಯದ ವೇಳೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಈ ಒಪ್ಪಂದದ ಉಲ್ಲಂನೆ ಎನಿಸಿದೆ. ಗಿಲ್​ ಡಿಕ್ಲೇರ್​ ಚಿತ್ರ,ವಿಡಿಯೋ ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಗಿಲ್​ ವಿರುದ್ಧ ಬಿಸಿಸಿಐ ಶಿಸ್ತುಕ್ರಮ ತೆಗೆದುಕೊಳ್ಳುವುದೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಗಿಲ್​ ವೈಯಕ್ತಿಕವಾಗಿ ನೈಕಿ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದಾರೆ. ಆದರೆ ಟೀಮ್​ ಇಂಡಿಯಾ ಪರ ಆಡುವಾಗ ಅವರು ಅಡಿಡಾಸ್​ ಕಿಟ್​ಅನ್ನೇ ಬಳಸಬೇಕಾಗುತ್ತದೆ. ಈ ಉಲ್ಲಂನೆಗಾಗಿ ಬಿಸಿಸಿಐ ವಿರುದ್ಧ ಅಡಿಡಾಸ್​ ಕಾನೂನು ಹೋರಾಟ ನಡೆಸುವುದೇ ಅಥವಾ ಕೇವಲ ಎಚ್ಚರಿಕೆಯನ್ನಷ್ಟೇ ನೀಡಿ ಪ್ರಾಯೋಜಕತ್ವ ಮುಂದುವರಿಸುವುದೇ ಎಂಬ ಪ್ರಶ್ನೆ ಎದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net