

ಅಹಮದಾಬಾದ್: ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡ ದೇಶೀಯ ಸೀನಿಯರ್ ಮಹಿಳಾ ಟಿ20 ಟೂರ್ನಿಯಲ್ಲಿ ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಾಖಲೆಯ 11 ಬಾರಿಯ ಚಾಂಪಿಯನ್ ರೈಲ್ವೇಸ್ ತಂಡದ ಓಟಕ್ಕೆ ಕಡಿವಾಣ ಹಾಕುವ ಹಂಬಲದಲ್ಲಿದೆ. ನರೇಂದ್ರ ಮೋದಿ ಸ್ಟೇಡಿಯಂನ ಬಿ ಗ್ರೌಂಡ್ನಲ್ಲಿ ಪ್ರಶಸ್ತಿ ಕಾದಾಟ ನಡೆಯಲಿದೆ.
ಲೀಗ್ ಹಂತದಲ್ಲಿ ಎಲ್ಲ 7 ಪಂದ್ಯ ಗೆದ್ದು ಪ್ರಾಬಲ್ಯ ಮೆರೆದಿದ್ದ ಶುಭಾ ಸತೀಶ್ ಸಾರಥ್ಯದ ಕರ್ನಾಟಕ, ಸೂಪರ್ ಲೀಗ್ನಲ್ಲೂ ಮೊದಲ 2 ಪಂದ್ಯ ಗೆದ್ದ ಬಳಿಕ ಕೊನೇ ಪಂದ್ಯದಲ್ಲಿ ದೆಹಲಿ ಎದುರು ಆಘಾತ ಎದುರಿಸಿತ್ತು. ಮತ್ತೊಂದೆಡೆ ರೈಲ್ವೇಸ್ ಲೀಗ್ನಲ್ಲಿ 6 ಜಯ, 1 ಸೋಲು ಕಂಡ ಬಳಿಕ ಸೂಪರ್ ಲೀಗ್ನಲ್ಲಿ ಎಲ್ಲ 3 ಪಂದ್ಯ ಗೆದ್ದು ಬೀಗಿತ್ತು.
ನಾಯಕಿ ಶುಭಾ ಸತೀಶ್ (393 ರನ್), ವೃಂದಾ ದಿನೇಶ್ (345) ಮತ್ತು ನಿಕಿ ಪ್ರಸಾದ್ (328) ಬ್ಯಾಟಿಂಗ್ನಲ್ಲಿ ಕರ್ನಾಟಕಕ್ಕೆ ಬಲ ತುಂಬಿದ್ದರೆ, ಬೌಲಿಂಗ್ನಲ್ಲಿ ಶ್ರೇಯಾಂಕಾ ಪಾಟೀಲ್ 20 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಶ್ರೇಯಾಂಕಾ ಕೊನೇ ಪಂದ್ಯದಲ್ಲಿ ದೆಹಲಿ ವಿರುದ್ಧ 29 ಎಸೆತಗಳಲ್ಲಿ 71 ರನ್ ಸಿಡಿಸಿ ಬ್ಯಾಟಿಂಗ್ನಲ್ಲೂ ಆಸರೆಯಾಗಿದ್ದರು.
ಅತ್ತ ಅನುಭವಿ ವೇಗಿ ರೇಣುಕಾ ಸಿಂಗ್ ಸಾರಥ್ಯದ ರೈಲ್ವೇಸ್ ತಂಡ ಶಿಪ್ರ ಗಿರಿ (266), ಪ್ರತಿಕಾ ರಾವಲ್ (237), ರಿಯಾ ಚೌಧರಿ (238) ಬ್ಯಾಟಿಂಗ್ ಬಲ ಹೊಂದಿದ್ದರೆ, ಬೌಲಿಂಗ್ನಲ್ಲಿ ಎಡಗೈ ಸ್ಪಿನ್ನರ್ ಏಕ್ತಾ ಬಿಷ್ಟ್ (19), ತನುಜಾ ಕನ್ವರ್ (12) ಶಕ್ತಿ ತುಂಬಿದ್ದಾರೆ.
ಈ ಹಿಂದೆ 2018-19ರಲ್ಲಿ ಫೈನಲ್ಗೇರಿ, ಪಂಜಾಬ್ ವಿರುದ್ಧ ಸೋತು ರನ್ನರ್ಅಪ್ ಆಗಿದ್ದ ಕರ್ನಾಟಕ ಈ ಬಾರಿ ಪ್ರಶಸ್ತಿ ಕನಸು ನನಸಾಗಿಸುವ ಭರವಸೆಯಲ್ಲಿದೆ.
ಆರಂಭ: ಸಂಜೆ 4.30
ನೇರಪ್ರಸಾರ: ಜಿಯೋ ಹಾಟ್ಸ್ಟಾರ್, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1