ಟೆಸ್ಟ್​ ಪಂದ್ಯಗಳಲ್ಲಿ ಸರಣಿ ಸೋಲು: ಟೀಮ್​ ಇಂಡಿಯಾ ಆಟಗಾರರಿಗೆ ಬಿಸಿಸಿಐ ಬಿಗ್​ ಶಾಕ್​! BCCI

BCCI
Published on

BCCI : ಇತ್ತೀಚಿನ ಟೆಸ್ಟ್‌ ಸರಣಿಗಳಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ತುಂಬಾ ಕಳಪೆಯಾಗಿದೆ. ನ್ಯೂಜಿಲೆಂಡ್​ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ವೈಟ್‌ವಾಶ್ ಆಗುವುದರ ಜೊತೆಗೆ, ಆತಿಥೇಯ ಆಸ್ಟ್ರೇಲಿಯಾದ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 1-3 ಅಂತರದಿಂದ ಹೀನಾಯ ಸೋಲನ್ನು ಅನುಭವಿಸಿತು. ಇದರ ಪರಿಣಾಮ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಅವಕಾಶವನ್ನು ಕಳೆದುಕೊಂಡಿತು.

ಈ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ), ಇತ್ತೀಚಿನ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ವಿದೇಶಿ ಪ್ರವಾಸಗಳ ಸಮಯದಲ್ಲಿ ಆಟಗಾರರ ಕುಟುಂಬದ ಸದಸ್ಯರು ಕೂಡ ಅವರ ಜೊತೆಗೆ ತೆರಳುವುದನ್ನು ನಿಯಂತ್ರಿಸುವುದು ಕೂಡ ಬಿಸಿಸಿಐ ತೆಗೆದುಕೊಂಡು ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಎನ್ನಲಾಗಿದೆ.

ಸ್ಪೋರ್ಟ್ಸ್ ನೌ ವರದಿ ಪ್ರಕಾರ, ವಿದೇಶ ಪ್ರವಾಸಗಳಲ್ಲಿ ಆಟಗಾರರು ತಮ್ಮ ಕುಟುಂಬಗಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಅವರ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಬಿಸಿಸಿಐ ನಂಬಿದೆ. ಆದ್ದರಿಂದ, ಆಟಗಾರರು ತಮ್ಮ ಕುಟುಂಬಗಳೊಂದಿಗೆ ಕಳೆಯಬಹುದಾದ ಸಮಯವನ್ನು ಸೀಮಿತಗೊಳಿಸುವ 2019ರ ಪೂರ್ವ ನಿಯಮವನ್ನು ಮತ್ತೆ ಪರಿಚಯಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಇದರ ಪ್ರಕಾರ 45 ದಿನಗಳ ವಿದೇಶ ಪ್ರವಾಸದಲ್ಲಿ ಆಟಗಾರರು ತಮ್ಮ ಕುಟುಂಬಗಳೊಂದಿಗೆ, ವಿಶೇಷವಾಗಿ ಪತ್ನಿಯರೊಂದಿಗೆ ಎರಡು ವಾರಗಳ ಕಾಲ ಮಾತ್ರ ಇರಲು ಬಿಸಿಸಿಐ ಅವಕಾಶ ನೀಡುತ್ತದೆ.

ಇದಿಷ್ಟೇ ಅಲ್ಲ ಪ್ರತಿಯೊಬ್ಬ ಆಟಗಾರನೂ ತಂಡದ ಇತರ ಸದಸ್ಯರೊಂದಿಗೆ ತಂಡದ ಬಸ್‌ನಲ್ಲೇ ಒಟ್ಟಿಗೆ ಪ್ರಯಾಣಿಸಬೇಕಾಗುತ್ತದೆ. ಇನ್ನು ಮುಂದೆ ಇಷ್ಟಪಟ್ಟಂತೆ ಒಂಟಿಯಾಗಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಒಟ್ಟಿಗೆ ಪ್ರಯಾಣ ಮಾಡುವುದರಿಂದ ತಂಡದಲ್ಲಿ ಏಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ ಬಿಸಿಸಿಐ ಸಹಾಯಕ ಸಿಬ್ಬಂದಿಯ ಒಪ್ಪಂದಗಳನ್ನು ಗರಿಷ್ಠ ಮೂರು ವರ್ಷಗಳವರೆಗೆ ನಿಗದಿಪಡಿಸಿದೆ.

ಅಂದಹಾಗೆ ನ್ಯೂಜಿಲೆಂಡ್ ವಿರುದ್ಧ ತವರು ನೆಲ ಮತ್ತು ಆಸ್ಟ್ರೇಲಿಯಾದಲ್ಲಿ ಸತತ ಟೆಸ್ಟ್ ಸರಣಿ ಸೋತ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್, ಅಭಿಷೇಕ್ ನಾಯರ್, ಮೋರ್ನೆ ಮೋರ್ಕೆಲ್ ಮತ್ತು ರಯಾನ್ ಟೆನ್ ಡೋಸ್ಚೇಟ್ ಸೇರಿದಂತೆ ಅವರ ಕೋಚಿಂಗ್​ ಸಿಬ್ಬಂದಿ ಆಟಗಾರರ ಪ್ರದರ್ಶನದ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ವಿಮಾನ ಪ್ರಯಾಣದ ಸಮಯದಲ್ಲಿ ಆಟಗಾರರ ಲಗೇಜ್ 150 ಕೆಜಿ ಮೀರಿದರೆ ಬಿಸಿಸಿಐ ಅದಕ್ಕೆ ಹಣ ನೀಡುವುದನ್ನು ನಿಲ್ಲಿಸುವುದು ಮತ್ತು ಆಟಗಾರರೇ ಆ ವೆಚ್ಚವನ್ನು ಸ್ವತಃ ಭರಿಸುವುದು ಕೂಡ ಬಿಸಿಸಿಐ ತೆಗೆದುಕೊಂಡ ನಿರ್ಧಾರಗಳಲ್ಲಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net