ಇನ್ನು ಟಿ20 ಕ್ರಿಕೆಟಿಗರಿಗೂ ಸಿಗಲಿದೆ ಬಿಸಿಸಿಐ ವಾರ್ಷಿಕ ಗುತ್ತಿಗೆ

bcci web
Published on

ನವದೆಹಲಿ: ಕೇಂದ್ರಿಯ ವಾರ್ಷಿಕ ಗುತ್ತಿಗೆ ಪಟ್ಟಿಯ ಮಾನದಂಡವನ್ನು ಬಿಸಿಸಿಐ ಬದಲಾಯಿಸಿದೆ. ಇದರಿಂದ ಇನ್ನು ಮುಂದೆ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುವ ಆಟಗಾರರಿಗೂ ಕೇಂದ್ರಿಯ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಲಭಿಸಲಿದೆ.

ಬಿಸಿಸಿಐ ಹೊಂದಿದ್ದ ಈ ಹಿಂದಿನ ನಿಯಮದನ್ವಯ, ಕನಿಷ್ಠ 3 ಟೆಸ್ಟ್ ಮತ್ತು 7 ಏಕದಿನ ಪಂದ್ಯ ಆಡಿದ ಆಟಗಾರರಿಗೆ ಮಾತ್ರ ಕೇಂದ್ರಿಯ ಗುತ್ತಿಗೆಯಲ್ಲಿ ಸ್ಥಾನ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಕನಿಷ್ಠ 10 ಟಿ20 ಪಂದ್ಯಗಳನ್ನು ಮಾತ್ರ ಆಡಿದ ಆಟಗಾರರಿಗೂ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗುತ್ತದೆ.

ಈ ಹಿಂದೆ ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಬಿಸಿಸಿಐ ಆಡಳಿತ ನೋಡಿಕೊಳ್ಳುತ್ತಿದ್ದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಟಿ20 ಕ್ರಿಕೆಟ್ ಪಂದ್ಯಗಳನ್ನು ಮಾತ್ರ ಆಡುವ ಆಟಗಾರರಿಗೆ ಕೇಂದ್ರಿಯ ಗುತ್ತಿಗೆಯಲ್ಲಿ ಸ್ಥಾನ ಕಲ್ಪಿಸಲು ನಿರಾಕರಿಸಿತ್ತು. ಆದರೆ ಇದೀಗ ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಆಡಳಿತ ಮಂಡಳಿ, ಟಿ20 ಕ್ರಿಕೆಟ್ ವಿಶೇಷಜ್ಞ ಆಟಗಾರರಿಗೂ ಕೇಂದ್ರಿಯ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ಕಲ್ಪಿಸಿದೆ.

ಕೇಂದ್ರಿಯ ಗುತ್ತಿಗೆ ಪಟ್ಟಿಯಲ್ಲಿ ಸದ್ಯ 4 ಶ್ರೇಣಿಗಳಿವೆ. ಎ ಪ್ಲಸ್ ಶ್ರೇಣಿಯ ಆಟಗಾರರು ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಉಳಿದಂತೆ ಎ, ಬಿ ಮತ್ತು ಸಿ ಶ್ರೇಣಿಯ ಕ್ರಿಕೆಟಿಗರು ಕ್ರಮವಾಗಿ 5, 3, 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇನ್ನು ಮುಂದೆ ವರ್ಷವೊಂದರಲ್ಲಿ 10 ಟಿ20 ಪಂದ್ಯಗಳನ್ನು ಮಾತ್ರ ಆಡುವ ಆಟಗಾರ ಆರಂಭಿಕ ಹಂತದಲ್ಲಿ ನೇರವಾಗಿ ಸಿ ಶ್ರೇಣಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net