

ಬೆಂಗಳೂರು: ಕೋವಿಡ್-19 ರಿಂದ ಕಳೆದ ಎರಡೂ ತಿಂಗಳಿಂದ ಜಾಗತಿಕ ಕ್ರೀಡಾಲೋಕವೇ ಸಂಪೂರ್ಣ ಬಂದ್ ಆಗಿದೆ. ದಿನ ಕಳೆದಂತೆ ಕರೊನಾ ವೈರಸ್ ಸೂಕ್ಷ್ಮ ಅರಿತಿರುವ ಹಿನ್ನೆಲೆಯಲ್ಲಿ ಕ್ರೀಡಾ ಸಚಿವಾಲಯದ ಅಣತಿಯಂತೆಯೂ ಕ್ರೀಡಾಭ್ಯಾಸಕ್ಕೂ ಅನುಮತಿ ನೀಡಿದೆ. ಎಲೈಟ್ ಕ್ರೀಡಾಪಟುಗಳು ಸ್ಥಳೀಯ ಸರ್ಕಾರ ಅನುಮತಿ ಪಡೆದು ಅಭ್ಯಾಸ ಕೈಗೊಳ್ಳುತ್ತಿದ್ದಾರೆ. ಈ ಕುರಿತು ಎಚ್ಚರಿಕೆ ಹೆಜ್ಜೆ ಇಟ್ಟಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಲಾಕ್‌ಡೌನ್ 4.0 ಅಂತ್ಯಗೊಳ್ಳುವವರೆಗೂ ಯಾವುದೇ ಚಟುವಟಿಕೆ ನಡೆಸುವುದಿಲ್ಲ ಅಂತ ಹೇಳಿಕೊಂಡಿದೆ. ಆದರೆ, ವೇಗಿ ಶಾರ್ದೂಲ್ ಠಾಕೂರ್ ಎರಡು ತಿಂಗಳ ಬಳಿಕ ಹೊರಾಂಗಣದಲ್ಲಿ ಅಭ್ಯಾಸ ಆರಂಭಿಸಿದ ಮೊದಲ ಭಾರತೀಯ ಕ್ರಿಕೆಟ್ ಎನಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಠಾಕೂರ್ ಮೇಲೆ ಗರಂ ಆಗಿದೆ.
ಇದನ್ನೂ ಓದಿ: ಅಮ್ಮ ಕ್ರೀಡಾತಾರೆ, ಮಗ ಕ್ರೀಡಾ ವೈದ್ಯ
ಮಹಾರಾಷ್ಟ್ರ ರಾಜಧಾನಿ ಮುಂಬೈಯಿಂದ 110 ಕಿಲೋ ಮೀಟರ್ ದೂರದಲ್ಲಿರುವ ಪಾಲ್ಗಾರ್ ಜಿಲ್ಲೆಯ ಬೊಯಿಸಾರ್ ಎಂಬದಲ್ಲಿ ಶಾರ್ದೂಲ್ ಠಾಕೂರ್ ಸ್ಥಳೀಯ ಆಟಗಾರರೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ. ಕರೊನಾ ವೈರಸ್ ಅಬ್ಬರ ಮಿತಿಮೀರಿದ್ದರೂ ಗ್ರೀನ್ ಹಾಗೂ ಆರೇಂಜ್ ವಲಯಗಳಲ್ಲಿ ವೈಯಕ್ತಿಕವಾಗಿ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ. ‘ಹೌದು ತರಬೇತಿ ಆರಂಭಿಸಿದ್ದೇವೆ, ಇದೊಂದು ಖುಷಿಯ ವಿಚಾರ’ ಎಂದು ಠಾಕೂರ್ ಹೇಳಿದ್ದಾರೆ. ಸ್ಥಳೀಯ ಆಡಳಿತದ ತೀರ್ಮಾನದಂತೆ ಠಾಕೂರ್ ಅಭ್ಯಾಸ ನಡೆಸಿದ್ದರೂ ಬಿಸಿಸಿಐನಿಂದ ಯಾವುದೇ ಅನುಮತಿ ಪಡೆಯದ ಕಾರಣ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಠಾಕೂರ್ ಜತೆಗೆ ಮುಂಬೈ ತಂಡದ ಹಾರ್ದಿಕ್ ತಾಮೊರೆ ಕೂಡ ಅಭ್ಯಾಸ ಆರಂಭಿಸಿದರು. ರಾಷ್ಟ್ರೀಯ ತಂಡದ ಪರ ಇದುವರೆಗೂ ಭಾರತ ಪರ ಏಕೈಕ ಟೆಸ್ಟ್, 11 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಿದ್ದಾರೆ.
ಮುಂಬೈನಲ್ಲಿ ಮಹಾಮಾರಿಯ ಅಬ್ಬರ ಅತಿಯಾಗಿರುವುದರಿಂದ ಇಲ್ಲಿ ನೆಲೆಸಿರುವ ಕ್ರಿಕೆಟಿಗರು ಅಭ್ಯಾಸದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಮುಂಬೈನಲ್ಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶ್ರೇಯಸ್ ಅಯ್ಯರ್ ಮನೆಯಲ್ಲೇ ಫಿಟ್ನೆಸ್‌ಗೆ ಒತ್ತುನೀಡುತ್ತಿದ್ದಾರೆ. ವೇಗಿ ಮೊಹಮದ್ ಶಮಿ, ತಮ್ಮ ಜಮೀನಿನಲ್ಲಿ ತರಬೇತಿ ಆರಂಭಿಸಿದ್ದರೆ, ಇಂಗ್ಲೆಂಡ್ ಕ್ರಿಕೆಟಿಗರಾದ ಬೆನ್ ಸ್ಟೋಕ್ಸ್, ಸ್ಟುವರ್ಟ್ ಬ್ರಾಡ್ ಹಾಗೂ ಕ್ರೀಸ್ ವೋಕ್ಸ್ ಸ್ಥಳೀಯ ಮೈದಾನಗಳಲ್ಲಿ ಗುರುವಾರದಿಂದ ಅಭ್ಯಾಸ ಆರಂಬಿಸಿದ್ದಾರೆ.