IPL 2024: ಇಂದು ಸೋಲದವರು-ಗೆಲ್ಲದವರ ಮುಖಾಮುಖಿ; ಸಿಎಸ್​ಕೆಗೆ ಡೆಲ್ಲಿ ಸವಾಲು

web dc vs csk
Published on

ವಿಶಾಖಪಟ್ಟಣ: ಐಪಿಎಲ್-17ರ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಭಾನುವಾರದ 2ನೇ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಬದಲಿ ತವರು ತಾಣವಾಗಿರುವ ವಿಶಾಖಪಟ್ಟಣದಲ್ಲಿ ರಿಷಭ್​ ಪಂತ್​ ಪಡೆಗೆ ಇದು ಮೊದಲ ಪಂದ್ಯವಾಗಿದ್ದರೆ, ಋತುರಾಜ್​ ಗಾಯಕ್ವಾಡ್​ ಪಡೆ ತವರು ನೆಲ ಚೆನ್ನೈನಿಂದ ಹೊರಗೆ ಮೊದಲ ಪಂದ್ಯ ಆಡಲಿದೆ.

ಸಿಎಸ್​ಕೆ ಎದುರು ಡೆಲ್ಲಿ ತಂಡದ ದಾಖಲೆ ಉತ್ತಮವಾಗಿಲ್ಲ. ಅಲ್ಲದೆ ಉಭಯ ತಂಡಗಳ ಕೊನೇ 4 ಮುಖಾಮುಖಿಗಳಲ್ಲಿ ಸಿಎಸ್​ಕೆ ತಂಡವೇ ಗೆದ್ದಿದೆ. 2021ರಲ್ಲಿ ಕೊನೆಯದಾಗಿ ಡೆಲ್ಲಿ ತಂಡ ಸಿಎಸ್​ಕೆ ಎದುರು ಜಯಿಸಿದೆ. ಹೀಗಾಗಿ ಡೆಲ್ಲಿ ತಂಡ ಈಗ ಟೂರ್ನಿಯಲ್ಲಿ ಖಾತೆ ತೆರೆಯಬೇಕಾದರೆ ತನ್ನ ಶ್ರೇಷ್ಠ ನಿರ್ವಹಣೆಯನ್ನೇ ತೋರಬೇಕಾದ ಅಗತ್ಯವಿದೆ. ಗುರು-ಶಿಷ್ಯರಾದ ಎಂಎಸ್​ ಧೋನಿ-ರಿಷಭ್​ ಪಂತ್​ ಮುಖಾಮುಖಿಯೂ ಪಂದ್ಯದ ಕುತೂಹಲಕಾರಿ ಅಂಶವಾಗಿದೆ.

ಸಿಎಸ್​ಕೆಗೆ ಹ್ಯಾಟಿಕ್​ ಜಯದ ನಿರೀಕ್ಷೆ

ತವರಿನ ಆರಂಭಿಕ 2 ಪಂದ್ಯಗಳಲ್ಲಿ ಆರ್​ಸಿಬಿ ಮತ್ತು ಗುಜರಾತ್​ ಎದುರು ಸುಲಭ ಗೆಲುವನ್ನೇ ಸಾಧಿಸಿರುವ ಸಿಎಸ್​ಕೆ, ಯುವ ನಾಯಕ ಋತುರಾಜ್​ ಗಾಯಕ್ವಾಡ್​ ಸಾರಥ್ಯದಲ್ಲಿ ಆಲ್ರೌಂಡ್​ ನಿರ್ವಹಣೆ ತೋರಿಸಿದೆ. ಎಂಎಸ್​ ಧೋನಿ ನಾಯಕತ್ವ ಬಿಟ್ಟರೂ, ಫೀಲ್ಡಿಂಗ್​ ವ್ಯೂಹ ರಚನೆಯಲ್ಲಿ ನೆರವಾಗುತ್ತಿರುವುದು ಸಿಎಸ್​ಕೆ ಬಲ ಹೆಚ್ಚಿಸಿದೆ. ಬ್ಯಾಟಿಂಗ್​-ಬೌಲಿಂಗ್​ನಲ್ಲಿ ಸದ್ಯ ಸಿಎಸ್​ಕೆ ತಂಡದಲ್ಲಿ ಯಾವುದೇ ಲೋಪದೋಷ ಕಾಣಿಸುತ್ತಿಲ್ಲ. ಆರಂಭಿಕ ಡೆವೊನ್​ ಕಾನ್​ವೇ ಅಲಭ್ಯತೆಯೂ ತಂಡವನ್ನು ಕಾಡಿಲ್ಲ. ಋತುರಾಜ್​ ಜತೆಗೆ ರಚಿನ್​ ರವೀಂದ್ರ ಆರಂಭಿಕರಾಗಿ ಉತ್ತಮ ಯಶ ಕಂಡಿದ್ದಾರೆ. ಧೋನಿ ಬ್ಯಾಟಿಂಗ್​ಗೆ ಇಳಿಯದೆಯೇ ಸಿಎಸ್​ಕೆ ಮೊದಲ ಎರಡೂ ಪಂದ್ಯ ಗೆದ್ದಿರುವುದು ಅದರ ಶಕ್ತಿಗೆ ಸಾ. ಹೀಗಾಗಿ ಸಿಎಸ್​ಕೆ ಈ ಬಾರಿ ತವರಿನ ಹೊರಗೂ ಗೆದ್ದು, ಹ್ಯಾಟ್ರಿಕ್​ ಗೆಲುವಿನ ಸಂಭ್ರಮ ಕಾಣುವ ತವಕದಲ್ಲಿದೆ.

ಪೃಥ್ವಿ ಷಾಗೆ ಅವಕಾಶ ನಿರೀಕ್ಷೆ

ಮುಂಬೈನ ಸ್ಫೋಟಕ ಆರಂಭಿಕ ಪೃಥ್ವಿ ಷಾ ಆರಂಭಿಕ 2 ಪಂದ್ಯಗಳಲ್ಲಿ ಅವಕಾಶ ಪಡೆದಿಲ್ಲ. ಆಸೀಸ್​ ಪರವೂ ಇನಿಂಗ್ಸ್​ ಆರಂಭಿಸಿದ ಅನುಭವ ಹೊಂದಿರುವ ಡೇವಿಡ್​ ವಾರ್ನರ್​-ಮಿಚೆಲ್​ ಮಾರ್ಷ್​ ಜೋಡಿಗೆ ಡೆಲ್ಲಿ ಮಣೆ ಹಾಕಿದ್ದು ಇದಕ್ಕೆ ಕಾರಣ. ಆದರೆ 3ನೇ ಕ್ರಮಾಂಕದ ಬ್ಯಾಟರ್​ ಆಗಿ ರಿಕಿ ಭುಯಿ ನಿರಾಸೆ ಮೂಡಿಸಿದ್ದಾರೆ. ಆಂಧ್ರದ ರಿಕಿ ಭುಯಿ ಕಳೆದ ರಣಜಿ ಟ್ರೋಫಿಯಲ್ಲಿ ಸರ್ವಾಧಿಕ 902 ರನ್​ ಸಿಡಿಸಿದ್ದರೂ, ಐಪಿಎಲ್​ನಲ್ಲಿ ಅದೇ ಲಯ ಮುಂದುವರಿಸಿಲ್ಲ. ಹೀಗಾಗಿ ಡೆಲ್ಲಿ ತಂಡ ಈ ಬಾರಿ ಬ್ಯಾಟಿಂಗ್​ ಕ್ರಮಾಂಕದಲ್ಲಿ ಕೆಲ ಬದಲಾವಣೆ ಮಾಡಿ ಪೃಥ್ವಿ ಷಾಗೆ ಸ್ಥಾನ ಕಲ್ಪಿಸುವ ಸಾಧ್ಯತೆಗಳಿವೆ. ಇನ್ನು ಬೌಲಿಂಗ್​ನಲ್ಲಿ ಅಕ್ಷರ್​ ಪಟೇಲ್​ ಹೊರತಾಗಿ ಇತರ ಬೌಲರ್​ಗಳು ದುಬಾರಿ ಆಗುತ್ತಿರುವುದು ಡೆಲ್ಲಿಗೆ ಹಿನ್ನಡೆ ತಂದಿದೆ.

ಮುಖಾಮುಖಿ: 29

ಸಿಎಸ್​ಕೆ: 19

ಡೆಲ್ಲಿ: 10

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net