

ದುಬೈ: ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇಆಫ್ ರೇಸ್‌ಗೆ ಮರಳಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರಲ್ಲಿ ನಡೆಯಲಿರುವ ಶನಿವಾರದ 2ನೇ ಪಂದ್ಯದಲ್ಲಿ ತನ್ನದೇ ಸ್ಥಿತಿಯಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ತಲಾ 4 ಗೆಲುವು ಮತ್ತು 6 ಸೋಲು ಕಂಡಿವೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಅವಕಾಶ ವೃದ್ಧಿಸಲಿದ್ದರೆ, ಸೋತ ತಂಡಕ್ಕೆ ಹೊರಬೀಳುವ ಅಪಾಯ ಹೆಚ್ಚಲಿದೆ. ದುಬೈನಲ್ಲೇ ನಡೆದಿದ್ದ ಉಭಯ ತಂಡಗಳ ಕಳೆದ ಮುಖಾಮುಖಿಯಲ್ಲಿ ಸನ್‌ರೈಸರ್ಸ್ ತಂಡ 69 ರನ್‌ಗಳಿಂದ ಭರ್ಜರಿ ಗೆಲುವು ಕಂಡಿತ್ತು.
ಉಭಯ ತಂಡಗಳಿಗೂ ಪ್ಲೇಆಫ್ ಅವಕಾಶ ಒಲಿಸಿಕೊಳ್ಳಲು ಉಳಿದ ನಾಲ್ಕೂ ಪಂದ್ಯಗಳಲ್ಲೂ ಗೆಲುವು ಅಗತ್ಯವಾಗಿದೆ. ಸತತ 5 ಸೋಲಿನಿಂದ ಕಂಗೆಟ್ಟಿದ್ದ ಕೆಎಲ್ ರಾಹುಲ್ ಬಳಗ ಇದೀಗ ಸತತ 3 ಜಯದೊಂದಿಗೆ ಭರ್ಜರಿ ಲಯ ಕಂಡುಕೊಂಡಿದೆ. ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತಂಡಕ್ಕೆ ಲಕ್ಕಿ ಚಾರ್ಮ್ ಆಗಿದ್ದು, ಅವರು ಕಣಕ್ಕಿಳಿದ ಬಳಿಕ ಪಂಜಾಬ್ ತಂಡ ಎಲ್ಲ ಪಂದ್ಯವನ್ನೂ ಜಯಿಸಿದೆ. ಅಂಕಪಟ್ಟಿಯಲ್ಲಿ ಅಗ್ರ 3 ಸ್ಥಾನದಲ್ಲಿರುವ ಡೆಲ್ಲಿ, ಮುಂಬೈ ಮತ್ತು ಆರ್‌ಸಿಬಿ ವಿರುದ್ಧ ಪಂಜಾಬ್ ತಂಡದ ಕೊನೇ 3 ಗೆಲುವುಗಳು ಬಂದಿರುವುದು ತಂಡದ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುವ ಅಂಶವಾಗಿದೆ.
ಸತತ 3 ಸೋಲಿನ ಬಳಿಕ ರಾಜಸ್ಥಾನ ರಾಯಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಂಡಿರುವ ಸನ್‌ರೈಸರ್ಸ್ ತಂಡವೂ ಮಾಡು ಇಲ್ಲವೆ ಮಡಿ ಒತ್ತಡದಲ್ಲಿದೆ. ರಾಯಲ್ಸ್ ವಿರುದ್ಧ ಕಂಡ ಗೆಲುವಿಗಿಂತ ಮುಖ್ಯವಾಗಿ ತಂಡದ ಮಧ್ಯಮ ಕ್ರಮಾಂಕದ ದೌರ್ಬಲ್ಯವನ್ನು ಮನೀಷ್ ಪಾಂಡೆ-ವಿಜಯ್ ಶಂಕರ್ ಜೋಡಿ ನೀಗಿಸಿರುವುದು ನಾಯಕ ಡೇವಿಡ್ ವಾರ್ನರ್‌ಗೆ ಹೆಚ್ಚು ಸಮಾಧಾನ ತಂದಿದೆ.
ಟೀಮ್ ನ್ಯೂಸ್:
ಸನ್‌ರೈಸರ್ಸ್ ಹೈದರಾಬಾದ್: ಜೇಸನ್ ಹೋಲ್ಡರ್ ಸೇರ್ಪಡೆ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ತಂದಿದೆ. ಹೀಗಾಗಿ ಇದೇ ಕಾಂಬಿನೇಷನ್ ಮುಂದುವರಿಯುವ ಸಾಧ್ಯತೆ ಇದ್ದು, ಕೇನ್ ವಿಲಿಯಮ್ಸನ್ ಮತ್ತೆ ಹೊರಗುಳಿಯಬೇಕಾಗಬಹುದು.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್ ಜಯ.
ಕಿಂಗ್ಸ್ ಇಲೆವೆನ್ ಪಂಜಾಬ್: ಕಳೆದ ಪಂದ್ಯದಲ್ಲಿ ಜಿಮ್ಮಿ ನೀಶಾಮ್‌ಗೆ ಅಚ್ಚರಿಯ ಅವಕಾಶ ಕಲ್ಪಿಸಿದ್ದ ತಂಡ ಈ ಬಾರಿ ಗೆಲುವಿನ ಕಾಂಬಿನೇಷನ್ ಬದಲಾಯಿಸುವ ಸಾಧ್ಯತೆ ಕಡಿಮೆ. ಗ್ಲೆನ್ ಮ್ಯಾಕ್ಸ್‌ವೆಲ್ ಲಯ ಕಂಡುಕೊಂಡಿರುವುದು ಕೂಡ ತಂಡದ ತಲೆನೋವು ತಗ್ಗಿಸಿದೆ.
ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಜಯ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.
ಮುಖಾಮುಖಿ: 15
ಸನ್‌ರೈಸರ್ಸ್: 11
ಪಂಜಾಬ್: 4