ನಾಯಕನ ದಿಟ್ಟ ನಡೆ; ಸಹ ಆಟಗಾರನನ್ನೇ ಮೈದಾನದಿಂದ ಹೊರ ಕಳುಹಿಸಿದ ಅಜಿಂಕ್ಯಾ ರಹಾನೆ

542352
Published on

ನವ ದೆಹಲಿ: ದುಲೀಪ್​ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ತೋರಿದ ದಿಟ್ಟ ನಿರ್ಧಾರಕ್ಕೆ ಕ್ರಿಕೆಟ್ ಪ್ರೇಮಿಗಳು, ಅಭಿಮಾನಿಗಳು ಮನಸೋತಿದ್ದಾರೆ. ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯ ತಂಡಗಳು ದುಲೀಪ್ ಟ್ರೋಫಿಯ ಫೈನಲ್ ಪಂದ್ಯ ಆಡುತ್ತಿದ್ದವು. ಈ ವೇಳೆ ಯಶಸ್ವಿ ಜೈಸ್ವಾಲ್ ಎದುರಾಳಿ ತಂಡದ ಆಟಗಾರನನ್ನು ಕೆಣಕಿದ್ದಾರೆ.

ದಕ್ಷಿಣ ತಂಡದ ಪರ ಬ್ಯಾಟಿಂಗ್ ನಡೆಸುತ್ತಿದ್ದ ರವಿತೇಜ ಅವರನ್ನು ಯಶಸ್ವಿ ಜೈಸ್ವಾಲ್ ಕೆಣಕಿದ್ದಾರೆ. ಇದರಿಂದ ಕೋಪಗೊಂಡ ರವಿತೇಜ ಜೈಸ್ವಾಲ್ ಅವರೊಂದಿಗೆ ಮಾತಿಗೆ ಇಳಿದಿದ್ದಾರೆ. ಶಾರ್ಟ್​ ಲೆಗ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್, ರವಿತೇಜ ಅವರ ಆಟಕ್ಕೆ ತೊಂದರೆ ಮಾಡುತ್ತಿದ್ದರು. ಈ ವೇಳೆ ರವಿತೇಜ ಅಂಪೈರ್​ ಬಳಿ ದೂರು ನೀಡಿದ್ದಾರೆ.

ಈ ವೇಳೆ ಪಶ್ಚಿಮ ವಲಯ ತಂಡದ ನಾಯಕ ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್​ಗೆ ಬುದ್ಧಿ ಮಾತು ಹೇಳಿದ್ದಾರೆ. ಇಷ್ಟಾದರೂ ನಾಯಕನ ಮಾತಿಗೆ ಬೆಲೆ ಕೊಡದೆ ರವಿತೇಜ ಅವರನ್ನು ಮತ್ತೆ ಕೆಣಕಿದ್ದಾರೆ. ಈ ವೇಳೆ ಅನುಚಿತ ವರ್ತನೆ ತೋರುತ್ತಿದ್ದ ಜೈಸ್ವಾಲ್​ ಅವರನ್ನು ನಾಯಕ ರಹಾನೆ ಮೈದಾನದಿಂದ ಹೊರಹೋಗುವಂತೆ ಖಡಕ್ ಸೂಚನೆ ನೀಡಿದ್ದಾರೆ. ನಂತರ ಫೀಲ್ಡಿಂಗ್ ಮಾಡಲು ಬದಲಿ ಆಟಗಾರನನ್ನು ಕರೆಯಿಸಿಕೊಂಡಿದ್ದಾರೆ.

ಭಾರತ ಟೆಸ್ಟ್ ತಂಡದ ನಾಯಕನಾಗಿದ್ದಾಗಲೂ ಹಲವು ಬಾರಿ ಅಜಿಂಕ್ಯಾ ರಹಾನೆ ಕ್ರೀಡಾ ಸ್ಫೂರ್ತಿ ಮೆರೆದು ಸುದ್ದಿಯಾಗಿದ್ದರು. ಇದೀಗ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲೂ ಎದುರಾಳಿ ಆಟಗಾರನಿಗೆ ಗೌರವ ಕೊಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಹಾನೆ ತೋರಿದ ನಿರ್ಧಾರಕ್ಕೆ ಎಲ್ಲರೂ ಬೆಂಬಲ ಸೂಚಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net