

ರಾವಲ್ಪಿಂಡಿ: ಇತ್ತೀಚೆಗಷ್ಟೇ ನಡೆದ ಟೀಮ್ ಇಂಡಿಯಾ (Team India) ಮತ್ತು ಬಾಂಗ್ಲಾದೇಶ (Bangladesh) ನಡುವಿನ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು 7 ವಿಕೆಟ್ಗಳ ಅಂತರದಿಂದ ಮಣಿಸಿದ ಭಾರತಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ಹರಿದುಬಂದಿತು. ಈ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಿಂದಲೂ ಅಭಿನಂದನೆ ವ್ಯಕ್ತವಾಯಿತು. ಅಸಲಿಗೆ ಈ ಮೆಚ್ಚುಗೆ, ಪ್ರಶಂಸೆ ಟೀಮ್ ಇಂಡಿಯಾ ಆಟಗಾರರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅಲ್ಲವೇ ಅಲ್ಲ. ಬದಲಿಗೆ ಬಾಂಗ್ಲಾದೇಶ ವಿರುದ್ಧದ ಪ್ರತಿಕಾರಕ್ಕಾಗಿ. ಅಷ್ಟಕ್ಕೂ ಬಾಂಗ್ಲಾ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಬಾಂಗ್ಲಾದೇಶ ಸೋತರೆ ಪಾಕ್ಗೆ ಏಕೆ ಖುಷಿ ಎಂಬುದಕ್ಕೆ ಒಂದು ಬಲವಾದ ಕಾರಣವೇ ಇದೆ.
ಎರಡು ಪಂದ್ಯಗಳ ಮೊದಲ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್ಗಳ ಅಂತರದಿಂದ ಹೀನಾಯವಾಗಿ ಸೋತ ಪಾಕಿಸ್ತಾನ, ತಮ್ಮನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು. ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಬಾಂಗ್ಲಾ, ಈ ಹಿಂದೆ ನಡೆದ 13 ಮ್ಯಾಚ್ಗಳ ಪೈಕಿ 12 ಬಾರಿ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಬೆವರಿಳಿಸಿದ್ದು, ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು. ಪಾಕ್ಗೆ ಮರೆಯಲಾಗದ ಸೋಲನ್ನು ಕೊಟ್ಟ ಬಾಂಗ್ಲಾ ವಿರುದ್ಧ ಒಂದೇ ಒಂದು ಮಾತು ಆಡಲಾರದ ಸ್ಥಿತಿಯಲ್ಲಿ ಮಾಜಿ ಆಟಗಾರರಿದ್ದರು.
ಟೀಮ್ ಇಂಡಿಯಾ ವಿರುದ್ಧ ಮೊದಲ ಟಿ20 ಕೈಚೆಲ್ಲಿದ ಬಾಂಗ್ಲಾದೇಶ ವಿರುದ್ಧ ಕಡೆಗೂ ಪ್ರತಿಕ್ರಾರ ತೀರಿಸಿಕೊಂಡ ಪಾಕ್ ಮಾಜಿ ಆಟಗಾರ ಬಸಿತ್ ಅಲಿ (Basit Ali), "ಇದು ಭಾರತ ತಂಡವಲ್ಲ ಬದಲಿಗೆ 11 ಟಿ20 ಸ್ಪೆಷಲಿಸ್ಟ್ಗಳನ್ನು ಹೊಂದಿರುವ ಐಪಿಎಲ್ ತಂಡ. ಇಂತಹ ಬಲಿಷ್ಠ ತಂಡದ ಎದುರು ಉತ್ತಮ ಪ್ರದರ್ಶನ ನೀಡಲು ಬಾಂಗ್ಲಾ ಆಟಗಾರರಿಗೆ ಸಾಧ್ಯವೇ ಇಲ್ಲ. ಅಂತಿಮವಾಗಿ ಭಾರತದ ಯುವ ಆಟಗಾರರ ಮುಂದೆ ಸೋಲು ಒಪ್ಪಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಉಳಿದಿರಲಿಲ್ಲ" ಎಂದು ಲೇವಡಿ ಮಾಡಿದರು.
"ಇದೇ ತಂಡವೇ ಅಂದು ನಮ್ಮ ಪಾಕಿಸ್ತಾನವನ್ನು ಮಣಿಸಿದ್ದು? ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿಯೂ ಹೀನಾಯವಾಗಿ ಸೋತ ಬಾಂಗ್ಲಾದೇಶ ಪಡೆ ಇದೀಗ ಮೊದಲ ಟಿ20 ಮ್ಯಾಚ್ನಲ್ಲಿಯೂ ಇಷ್ಟು ಕಳೆಪೆ ಪ್ರದರ್ಶನ? ಎಂತಹ ಪರಿಸ್ಥಿತಿ ಇದು. ಟೀಮ್ ಇಂಡಿಯಾವನ್ನು ಚಾಲೆಂಜ್ ಮಾಡಲು ಬಾಂಗ್ಲಾಗೆ ಸಾಧ್ಯವೇ ಇಲ್ಲ. ಅಸಲಿಗೆ ಇದೇ ಸತ್ಯ" ಎಂದು ತಮ್ಮ ತಂಡವನ್ನು ಹೀನಾಯವಾಗಿ ಸೋಲಿಸಿದ್ದ ಬಾಂಗ್ಲಾದೇಶದ ವಿರುದ್ಧ ಬಸಿತ್ ಅಲಿ ಪ್ರತಿಕಾರ ತೀರಿಸಿಕೊಂಡಿದ್ದಾರೆ,(ಏಜೆನ್ಸೀಸ್).