

ರಾಂಚಿ: ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (73 ರನ್, 117 ಎಸೆತ, 8 ಬೌಂಡರಿ, 1 ಸಿಕ್ಸರ್) ಅವರ ಮತ್ತೊಂದು ಅಮೋಘ ಇನಿಂಗ್ಸ್ ನಡುವೆ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಶೋಯಿಬ್ ಬಶೀರ್ (84ಕ್ಕೆ 4) ದಾಳಿಗೆ ಕುಸಿದಿದೆ. ಇದರೊಂದಿಗೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ ಮೊದಲ ಇನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದ್ದರೆ, ಇಂಗ್ಲೆಂಡ್ ತಂಡ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸುವತ್ತ ಪ್ರಯತ್ನದಲ್ಲಿದೆ.
ಜೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 7 ವಿಕೆಟ್ಗೆ 302 ರನ್ಗಳಿಂದ ಎರಡನೇ ದಿನದಾಟ ಮುಂದುವರಿಸಿದ ಇಂಗ್ಲೆಂಡ್, ಮತ್ತೆ 51 ರನ್ ಸೇರಿಸಿ 353 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ ತಂಡ, ಜೈಸ್ವಾಲ್ ಹೊರತಾಗಿ ಇತರ ಬ್ಯಾಟರ್ಗಳು ಕ್ರೀಸ್ನಲ್ಲಿ ನೆಲೆಯೂರಲು ವಿಫಲರಾಗಿದ್ದರಿಂದ ದಿನದಂತ್ಯಕ್ಕೆ 7 ವಿಕೆಟ್ಗೆ 219 ರನ್ ಗಳಿಸಿ ಸಂಕಷ್ಟದಲ್ಲಿದೆ. ಭಾರತ ಇನ್ನೂ 134 ರನ್ ಹಿನ್ನಡೆಯಲ್ಲಿದ್ದು, ಪಂದ್ಯದ ಉಳಿದ 3 ದಿನಗಳಲ್ಲಿ ದಿಟ್ಟವಾಗಿ ತಿರುಗೇಟು ನೀಡಬೇಕಾದ ಸವಾಲು ಹೊಂದಿದೆ.
ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ (30*) ಜತೆಗೆ ಕುಲದೀಪ್ ಯಾದವ್ (17*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದಂತ್ಯದಲ್ಲಿ ಸುಮಾರು 18 ಓವರ್ಗಳ ಕಾಲ ಆಂಗ್ಲರಿಗೆ ಸವಾಲಾಗಿ ನಿಂತ ಈ ಜೋಡಿ ಮುರಿಯದ 8ನೇ ವಿಕೆಟ್ಗೆ ಈಗಾಗಲೆ 42 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆಯ ಆಸೆಯನ್ನು ಇನ್ನೂ ಜೀವಂತವಿಟ್ಟಿದೆ. ಭಾರತ 7 ವಿಕೆಟ್ಗೆ 177 ರನ್ ಗಳಿಸಿದಾಗ ಜತೆಗೂಡಿದ ಈ ಜೋಡಿ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದ 3ನೇ ದಿನದಾಟಕ್ಕೆ ಮಳೆ ಭೀತಿ ಇದ್ದು, ಹೆಚ್ಚಿನ ಓವರ್ ನಷ್ಟವಾದರೆ ಪಂದ್ಯ ಡ್ರಾದತ್ತ ಸಾಗುವ ಸಾಧ್ಯತೆ ಹೆಚ್ಚಾಗಲಿದೆ.
ಬಶೀರ್ಗೆ ಬೆದರಿದ ಭಾರತ
ಕೇವಲ 2ನೇ ಟೆಸ್ಟ್ ಪಂದ್ಯ ಆಡುತ್ತಿರುವ 20 ವರ್ಷದ ಸ್ಪಿನ್ನರ್ ಶೋಯಿಬ್ ಬಶೀರ್ ಒಂದು ಬದಿಯಿಂದ ಸತತ 31 ಓವರ್ಗಳ ಮ್ಯಾರಥಾನ್ ಬೌಲಿಂಗ್ ದಾಳಿ ನಡೆಸಿ ಭಾರತವನ್ನು ಕಾಡಿದರು. ಶುಭಮಾನ್ ಗಿಲ್ (38), ರಜತ್ ಪಾಟೀದಾರ್ (17) ಮತ್ತು ರವೀಂದ್ರ ಜಡೇಜಾಗೆ (12) ಕ್ರೀಸ್ನಲ್ಲಿ ಹೆಚ್ಚುಹೊತ್ತು ನಿಲ್ಲಲು ಬಿಡದ ಬಶೀರ್, ಮತ್ತೊಂದು ಶತಕದತ್ತ ಮುನ್ನಡೆದಿದ್ದ ಯಶಸ್ವಿ ಜೈಸ್ವಾಲ್ರನ್ನೂ ಚಹಾ ವಿರಾಮದ ಬಳಿಕ ತನ್ನ ಬಲೆಗೆ ಬೀಳಿಸಿದರು. ಸ್ಕಿಡ್ ಆಗಿ ಬಂದ ಚೆಂಡು ಜೈಸ್ವಾಲ್ ರಕ್ಷಣಾತ್ಮಕ ಆಟವನ್ನು ಬೇಧಿಸಿ ವಿಕೆಟ್ ಉರುಳಿಸಿತು.
ಮತ್ತೆ ಜೈಸ್ವಾಲ್ ಆಧಾರ
ನಾಯಕ ರೋಹಿತ್ ಶರ್ಮ (2) ಭಾರತೀಯ ಇನಿಂಗ್ಸ್ನ 3ನೇ ಓವರ್ನಲ್ಲೇ ವೇಗಿ ಜೇಮ್ಸ್ ಆಂಡರ್ಸನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೈಸ್ವಾಲ್, ಶುಭಮಾನ್ ಗಿಲ್ ಜತೆಗೆ 2ನೇ ವಿಕೆಟ್ಗೆ 82 ರನ್ ಸೇರಿಸಿ ಚೇತರಿಕೆ ಒದಗಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಬಶೀರ್ ದಾಳಿಗೆ ಕುಸಿದ ಭಾರತ 44 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು. ರಜತ್ ಪಾಟೀದಾರ್ ತನಗೆ ಸಿಕ್ಕ ಮತ್ತೊಂದು ಅವಕಾಶವನ್ನು ಕೈಚೆಲ್ಲಿದರೆ, 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಜಡೇಜಾ ಕೂಡ ನಿರಾಸೆ ಮೂಡಿಸಿದರು. ಆದರೆ ಮತ್ತೊಂದೆಡೆಯಿಂದ ತಂಡಕ್ಕೆ ಆಸರೆಯಾಗಿ ನಿಂತ 22 ವರ್ಷದ ಜೈಸ್ವಾಲ್, ಮತ್ತೋರ್ವ ಮುಂಬೈ ಬ್ಯಾಟರ್ ಸರ್ಫ್ರಾಜ್ ಖಾನ್ (14) ಜತೆಗೂಡಿ 5ನೇ ವಿಕೆಟ್ಗೆ 31 ರನ್ ಸೇರಿಸಿದರು. ಈ ವೇಳೆ ರನೌಟ್ನಿಂದ ಪಾರಾದ ಸರ್ಫ್ರಾಜ್, ನಂತರ ಟಾಮ್ ಹಾರ್ಟ್ಲಿ ಎಸೆತದಲ್ಲಿ ಔಟಾದರು. ಬಳಿಕ ಆರ್. ಅಶ್ವಿನ್ ಸರಣಿಯಲ್ಲಿ ಬೌಲಿಂಗ್ನಂತೆ ಬ್ಯಾಟಿಂಗ್ನಲ್ಲೂ ನಿರಾಶಾದಾಯಕ ನಿರ್ವಹಣೆ ಮುಂದುವರಿಸಿದರು.
ಆಂಗ್ಲರಿಗೆ ಜಡೇಜಾ ಕಡಿವಾಣ
ಬೆಳಗ್ಗೆ ಜೋ ರೂಟ್ (122*, 274 ಎಸೆತ, 10 ಬೌಂಡರಿ) ಮತ್ತು ಒಲಿ ರಾಬಿನ್ಸನ್ (58) ಜೋಡಿ 8ನೇ ವಿಕೆಟ್ ಜತೆಯಾಟವನ್ನು 102 ರನ್ಗಳಿಗೆ ವಿಸ್ತರಿಸಿತು. ಆದರೆ ರವೀಂದ್ರ ಜಡೇಜಾ (67ಕ್ಕೆ 4) ದಿನದ 13ನೇ ಓವರ್ನಲ್ಲಿ ಈ ಜೋಡಿಯನ್ನು ಬೇರ್ಪಡಿಸುತ್ತಿದ್ದಂತೆ ಇಂಗ್ಲೆಂಡ್ ದಿಢೀರ್ ಕುಸಿತ ಕಂಡಿತು. 6 ರನ್ ಅಂತರದಲ್ಲಿ ಆಂಗ್ಲರ ಕೊನೇ 3 ವಿಕೆಟ್ಗಳು ಉರುಳಿದವು. ಶೋಯಿಬ್ ಬಶೀರ್, ಜೇಮ್ಸ್ ಆಂಡರ್ಸನ್ ಇಬ್ಬರೂ ಖಾತೆ ತೆರೆಯದೆ ಜಡೇಜಾಗೆ ವಿಕೆಟ್ ಒಪ್ಪಿಸಿದ್ದರಿಂದ ಶತಕವೀರ ಜೋ ರೂಟ್ ಏಕಾಂಗಿಯಾಗಿ ಕ್ರೀಸ್ನಲ್ಲಿ ಉಳಿದರು.