

ಲಂಡನ್: ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೋವಾ ಹಾಗೂ ಇಟಲಿಯ ಜಾಸ್ಮಿನ್ ಪಾವೊಲಿನಿ ಮಹಿಳಾ ಸಿಂಗಲ್ಸ್‌ನಲ್ಲಿ ಶನಿವಾರ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ವಿಂಬಲ್ಡನ್ ಗ್ರಾಂಡ್ ಸ್ಲಾಂನಲ್ಲಿ ೈನಲ್ ಆಡಲಿದ್ದು, ಚೊಚ್ಚಲ ಪ್ರಶಸ್ತಿಯ ತವಕದಲ್ಲಿದ್ದಾರೆ.
ಕ್ರೆಜ್ಸಿಕೋವಾ 2021ರಲ್ಲಿ ಫ್ರೆಂಚ್ ಓಪನ್ ಜಯಿಸಿದ ಬಳಿಕ ಮೊದಲ ಬಾರಿ ಗ್ರಾಂಡ್ ಸ್ಲಾಂ ಫೈನಲ್‌ಗೇರಿದರೆ, ಪಾವೊಲಿನಿ ರೋಲ್ಯಾಂಡ್ ಗ್ಯಾರಸ್‌ನಲ್ಲಿ ಹಾಲಿ ವರ್ಷ ರನ್ನರ್ ಅಪ್ ಆಗಿದ್ದರು. ಪಾವೊಲಿನಿ ಟೂರ್ನಿಯಲ್ಲಿ 7ನೇ ಶ್ರೇಯಾಂಕ ಹೊಂದಿದ್ದು, ಕ್ರೆಜ್ಸಿಕೋವಾ 31ನೇ ಶ್ರೇಯಾಂಕ ಹೊಂದಿದ್ದಾರೆ. ಆದರೆ 28 ವರ್ಷದ ಕ್ರೆಜ್ಸಿಕೋವಾ ಮಹಿಳಾ ಡಬಲ್ಸ್‌ನಲ್ಲಿ ಗೆದ್ದ 7 ಪ್ರಶಸ್ತಿಗಳಲ್ಲಿ 2 ಬಾರಿ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. 2016ರ ಬಳಿಕ ವಿಂಬಲ್ಡನ್‌ನಲ್ಲಿ ಆರು ಆಟಗಾರ್ತಿಯರು ಚಾಂಪಿಯನ್ ಆಗಿದ್ದು, ಈ ಬಾರಿಯೂ ಹೊಸಬರು ಪ್ರಶಸ್ತಿ ಜಯಿಸಲಿದ್ದಾರೆ.
ಸತತ 2ನೇ ಗ್ರಾಂಡ್ ಸ್ಲಾಂ ಫೈನಲ್ ಆಡಲಿರುವ ಪಾವೊಲಿನಿ, 1968ರ ಬಳಿಕ ವಿಂಬಲ್ಡನ್ ಫೈನಲ್ ಆಡಲಿರುವ ಇಟಲಿಯ ಮೊದಲ ಆಟಗಾರ್ತಿ ಎನಿಸಿದ್ದಾರೆ. ಇಬ್ಬರು ಫೈನಲಿಸ್ಟ್‌ಗಳು ಈ ಹಿಂದೆ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, 2018ರಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಅರ್ಹತಾ ಪಂದ್ಯದಲ್ಲಿ ಕ್ರೆಜ್ಸಿಕೋವಾ ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿದ್ದರು.
ಆರಂಭ: ಸಂಜೆ 6.15
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್