ಇಂಜುರಿಯಲ್ಲೇ ಬ್ಯಾಟ್ ಬೀಸಿದ ರೋಹಿತ್ ಶರ್ಮಾ; ರೋಚಕ ಪಂದ್ಯದಲ್ಲಿ ಗೆದ್ದ ಬಾಂಗ್ಲಾದೇಶ

Rohith Sharma
Published on

ಢಾಕಾ: ಎರಡನೇ ಏಕದಿನ ಪಂದ್ಯದಲ್ಲೂ ರೋಚಕ ಜಯ ಗಳಿಸುವ ಮೂಲಕ ಬಾಂಗ್ಲಾದೇಶ ತಂಡ ಸರಣಿ ಕೈವಶ ಮಾಡಿಕೊಂಡಿದೆ. ಈ ಮೂಲಕ ಸರಣಿಯಲ್ಲಿ 2-0 ಅಂತರ ಕಾಯ್ದುಕೊಂಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 271 ರನ್ ಕಲೆ ಹಾಕಿತು.

272 ರನ್​ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಇನಿಂಗ್ಸ್ ಆರಂಭಿಸಿದ ಕೊಹ್ಲಿ ಕೇವಲ 5 ರನ್​ಗಳಿಸಿ ಬೌಲ್ಡ್ ಆದರು. ಇದರ ಬೆನ್ನಲ್ಲೇ ಶಿಖರ್ ಧವನ್ 8 ರನ್ ಗಳಿಸಿ ಮುಸ್ತಫಿಜುರ್ ರೆಹಮಾನ್ ಎಸೆತದಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ 82 ರನ್ ಗಳಿಸಿ ತಂಡಕ್ಕೆ ನೆರವಾದರು. ಆದರೆ ಮತ್ತೊಂದೆಡೆ ವಾಷಿಂಗ್ಟನ್ ಸುಂದರ್ (11) ಕೆಎಲ್ ರಾಹುಲ್ (14) ಬೇಗನೆ ಇನ್ನಿಂಗ್ಸ್​ ಆಧರಿಸುವಲ್ಲಿ ವಿಫಲರಾದರು. ಟೀಮ್ ಇಂಡಿಯಾಗೆ ಆಸರೆಯಾಗಿದ್ದ ಶ್ರೇಯಸ್ ಅಯ್ಯರ್-ಅಕ್ಷರ್ ಪಟೇಲ್ ಜೋಡಿ. 5ನೇ ವಿಕೆಟ್​ಗೆ 107 ರನ್​ಗಳ ಜೊತೆಯಾಟವಾಡಿತು. ಅಕ್ಷರ್ ಪಟೇಲ್ (56) ಅರ್ಧಶತಕ ಸಿಡಿಸಿ ಮಿಂಚಿದರು. ಬಳಿಕ ಬಂದ ಶಾರ್ದೂಲ್ ಠಾಕೂರ್ (7) ಹಾಗೂ ದೀಪಕ್ ಚಹರ್ (11) ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದರು. 1

ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೊನೆಯಲ್ಲಿ ಬ್ಯಾಟಿಂಗ್​ಗೆ ಆಗಮಿಸಿದರು. ಇಬಾದತ್ ಹೊಸೇನ್ ಓವರ್​ನಲ್ಲಿ 2 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ ಅಬ್ಬರಿಸಿದ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಗೆಲುವನ್ನು ಜೀವಂತವಾಗಿರಿಸಿದರು. ಆದರೆ 48ನೇ ಓವರ್​ನಲ್ಲಿ ಮುಸ್ತಫಿಜುರ್ ರೆಹಮಾನ್ ಮೇಡನ್ ಓವರ್ ಮಾಡಿದರು. ಬ್ಯಾಟಿಂಗ್ ಮಾಡುತ್ತಿದ್ದ ಬೌಲರ್ ಸಿರಾಜ್ ಪರದಾಡುವಂತಾಯಿತು.

50ನೇ ಓವರ್​ನ ಕೊನೆಯ ಎಸೆತವನ್ನು ಯಾರ್ಕರ್ ಎಸೆಯುವ ಮೂಲಕ ಮುಸ್ತಫಿಜುರ್ ರೆಹಮಾನ್ ಬಾಂಗ್ಲಾದೇಶ್ ತಂಡಕ್ಕೆ 5 ರನ್​ಗಳ ಜಯ ತಂದುಕೊಟ್ಟರು. ಕೊನೆಯಲ್ಲಿ ಬಂದು 28 ಎಸೆತಗಳಲ್ಲಿ 51 ರನ್​ ಸಿಡಿಸಿದ ರೋಹಿತ್ ಶರ್ಮಾ ಹೋರಾಟದ ಫಲವಾಗಿಯೂ ಟೀಂ ಇಂಡಿಯಾ ಗೆಲುವು ಸಾಧಿಸುವಲ್ಲಿ ಎಡವಿತು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net