ಬಾಂಗ್ಲಾದೇಶ ಕ್ರಿಕೆಟಿಗನಿಗೆ ಕಪಾಳಮೋಕ್ಷ: ಕೋಚ್ ಸ್ಥಾನದಿಂದ ಹತುರಸಿಂಘ ಅಮಾನತು

New-Project-7
Published on

ಢಾಕಾ: ಬಾಂಗ್ಲಾದೇಶ ಕ್ರಿಕೆಟಿಗನಿಗೆ ಕಪಾಳಮೋಕ್ಷ ಮಾಡಿರುವ ಪ್ರಕರಣದಲ್ಲಿ ಮುಖ್ಯ ಕೋಚ್ ಚಂಡಿಕ ಹತುರಸಿಂಘ ಅವರನ್ನು ಮುಖ್ಯ ತರಬೇತುದಾರ ಸ್ಥಾನದಿಂದ ಅಮಾನತುಗೊಳಿಸಿರುವುದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಿಳಿಸಿದೆ. ಅವರ ಸ್ಥಾನಕ್ಕೆ ವೆಸ್ಟ್ ಇಂಡೀಸ್‌ನ ಫಿಲ್ ಸಿಮನ್ಸ್ ಅವರನ್ನು ನೂತನ ಮುಖ್ಯ ತರಬೇತುದಾರನ್ನಾಗಿ ನೇಮಕ ಮಾಡಿದೆ. ಮುಂದಿನ ವರ್ಷದ ಚಾಂಪಿಯನ್ಸ್ ಟ್ರೋಫಿವರೆಗೂ ಬಾಂಗ್ಲಾ ತಂಡಕ್ಕೆ ಸಿಮ್ಸನ್ ಮಾರ್ಗದರ್ಶನ ನೀಡಲಿದ್ದಾರೆ.

ಶ್ರೀಲಂಕಾ ಮಾಜಿ ಆಲ್ರೌಂಡರ್ ಹತುರಸಿಂಘ ಅವರು ಭಾರತದ ಆತಿಥ್ಯದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಬಾಂಗ್ಲಾದೇಶ ಆಟಗಾರನ ಕಪಾಳಕ್ಕೆ ಬಾರಿಸಿದ ಆರೋಪ ಎದುರಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬಿಸಿಬಿ, ಮುಖ್ಯ ಕೋಚ್ ಸ್ಥಾನದಿಂದ ಚಂಡಿಕ ಹತುರಸಿಂಘ ಅವರನ್ನು ಅಮಾನತುಗೊಳಿಸಿದ್ದು, ಮುಂದಿನ 48 ಗಂಟೆಗಳಲ್ಲಿ ಅವರ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಲಾಗುವುದು ಎಂದು ತನ್ನ ವೈಬ್‌ಸೈಟ್‌ನಲ್ಲಿ ತಿಳಿಸಿದೆ. ಕಳೆದ ವರ್ಷ ೆಬ್ರವರಿಯಲ್ಲಿ ಎರಡನೇ ಅವಧಿಗೆ ಬಾಂಗ್ಲಾ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದ 57 ವರ್ಷದ ಹತುರಸಿಂಘ ಅವರ ಅವಧಿ 2025ರ ಚಾಂಪಿಯನ್ಸ್ ಟ್ರೋಫಿವರೆಗೆ ಇತ್ತು. ಹತುರಸಿಂಘ ಮಾರ್ಗದರ್ಶನದಲ್ಲಿಯೇ ಬಾಂಗ್ಲಾದೇಶ ತಂಡ ಇತ್ತೀಚೆಗೆ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net