

ನವದೆಹಲಿ: ರಾಷ್ಟ್ರೀಯ ಟೆಸ್ಟ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆ ವಹಿಸಿಕೊಳ್ಳುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ನೀಡಿದ ಪ್ರಸ್ತಾಪವನ್ನು ಮಾಜಿ ಆಟಗಾರ ಸಂಜಯ್ ಬಂಗಾರ್ ತಿರಸ್ಕರಿಸಿದ್ದಾರೆ. ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಕಾರ್ಯನಿರತವಾಗಿರುವ ಕಾರಣ ಈ ಆಹ್ವಾನ ತಿರಸ್ಕರಿಸುತ್ತಿರುವುದಾಗಿ ತಿಳಿಸಿದ್ದಾರೆ. ಎಂಟು ವಾರಗಳ ಹಿಂದೆಯೇ ಬಂಗಾರ್ಗೆ ಬ್ಯಾಟಿಂಗ್ ಸಲಹೆಗಾರರಾಗುವಂತೆ ಆಹ್ವಾನ ನೀಡಲಾಗಿತ್ತು. ಆದರೆ, ಎರಡು ವರ್ಷಗಳ ಕಾಲ ಬಂಗಾರ್ ಸ್ಟಾರ್ ಸ್ಪೋರ್ಟ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಆಹ್ವಾನ ತಿರಸ್ಕರಿಸಿದ್ದಾರೆ.
‘8 ವಾರಗಳ ಹಿಂದೆಯೇ ಬಿಸಿಬಿ ನನಗೆ ಆಹ್ವಾನ ನೀಡಿತ್ತು. ಆದರೆ, ಸ್ಟಾರ್ ಸ್ಪೋರ್ಟ್ಸ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವೈಯಕ್ತಿಕ ಹಾಗೂ ವೃತ್ತಿಜೀವನಕ್ಕೆ ಹೊಂದಿಕೊಳ್ಳುವಂಥ ಅವಕಾಶವನ್ನು ಸ್ಟಾರ್ ಸ್ಪೋರ್ಟ್ಸ್
ನೀಡಿತು. ಇದರಿಂದ ಬಿಸಿಬಿ ಅವಕಾಶ ತಿರಸ್ಕರಿಸಿದೆ. ಭವಿಷ್ಯದಲ್ಲಿ ಬಿಸಿಬಿ ಜತೆ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಒಪ್ಪಿಕೊಳ್ಳುವೆ’ ಎಂದು ಬಂಗಾರ್ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ನೀಲ್ ಮೆಕೆನ್ಜೀ ಸದ್ಯ ಬಾಂಗ್ಲಾದ ಟಿ20 ತಂಡದ ಬ್ಯಾಟಿಂಗ್ ಸಲಹೆಗಾರರಾಗಿದ್ದಾರೆ. ಸಂಜಯ್ ಬಂಗಾರ್ 2014 ರಿಂದ 2019ರವರೆಗೂ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಿನಿಂದ ವಿಕ್ರಮ್ ರಾಥೋಡ್ ಈ ಹುದ್ದೆಯಲ್ಲಿದ್ದಾರೆ.
ವಿಶ್ವಕಪ್ ಬಳಿಕ ಬಂಗಾರ್ ಭಾರತದ ಪರ ಕೊನೇ ಬಾರಿಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದರು. ನಂತರ ತಂಡದ ಸಿಬ್ಬಂದಿ ನೇಮಕದಲ್ಲಿ ಬಂಗಾರ್ ಹೊರತುಪಡಿಸಿ ಉಳಿದವರು ತಮ್ಮ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಭಾರತ ತಂಡದ ಸಿಬ್ಬಂದಿ ವರ್ಗದಿಂದ 47 ವರ್ಷದ ಬಂಗಾರ್ ಹೊರಬಿದ್ದ ಬಳಿಕ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2001ರಿಂದ 2004ರ ಅವಧಿಯಲ್ಲಿ ಬಂಗಾರ್ ಭಾರತ ಪರ 12 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳನ್ನಾಡಿದ್ದಾರೆ. -ಪಿಟಿಐ