

ಕೋಲ್ಕತ: ಆರಂಭಿಕ ಮುನ್ನಡೆ ನಡುವೆಯೂ ಪಂದ್ಯದಲ್ಲಿ ಹಿಡಿತ ಸಾಧಿಸಲು ವಿಫಲವಾದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಅಭಿಯಾನವನ್ನು ಸೆಮಿಫೈನಲ್ನಲ್ಲೇ ಮುಗಿಸಿತು.
ಸುಮಾರು 50 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್ಸಿ 1-3 ರಿಂದ ಸೋಲನುಭವಿಸಿತು. ತವರು ನೆಲದಲ್ಲಿ ಕಳೆದ ವಾರ ನಡೆದ ಮೊದಲ ಸೆಮಿಫೈನಲ್ ಚರಣದಲ್ಲಿ 1-0 ಯಿಂದ ಜಯ ದಾಖಲಿಸಿದ್ದರೂ ಗೋಲುಗಳ ಸರಾಸರಿಯಲ್ಲಿ 3-2 ರಿಂದ ಹಿಂದೆ ಉಳಿಯಿತು.
ಈ ಸೋಲಿನೊಂದಿಗೆ ಬಿಎಫ್ಸಿ ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಲು ವಿಫಲವಾಯಿತು. ಎಎಫ್ಸಿ ಅರ್ಹತಾ ಸುತ್ತಿನಲ್ಲೂ ಎಡವಿದ್ದ ಬಿಎಫ್ಸಿ ಇದೀಗ ಐಎಸ್ಎಲ್ನಲ್ಲೂ ನಿರಾಸೆ ಕಂಡಿತು.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಆರಂಭಿಕ ನಿಮಿಷದಲ್ಲೇ ಬಿಎಫ್ಸಿ ಮೇಲುಗೈ ಸಾಧಿಸಿತು. ತಂಡದ ಮುನ್ಪಡೆ ಆಟಗಾರ ಆಶಿಕ್ ಕುರಿಯನ್ (5ನೇ ನಿಮಿಷ) ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಆರಂಭದಲ್ಲೇ ಆತಿಥೇಯ ಎಟಿಕೆಗೆ ಆಘಾತ ನೀಡಿದ ಬಿಎಫ್ಸಿ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಿತು.
ಬಳಿಕ ಎಟಿಕೆ ತಂಡದ ಮುನ್ಪಡೆ ಆಟಗಾರ ಕೃಷ್ಣ ರಾಯ್ (30ನೇ ನಿಮಿಷ) ಆಕರ್ಷಕ ಗೋಲು ಗಳಿಸುವ ಮೂಲಕ ಬಿಎಫ್ಸಿಗೆ ತಿರುಗೇಟು ನೀಡಿದರು. ಇದರೊಂದಿಗೆ ಮೊದಲಾರ್ಧದ ವೇಳೆ ಉಭಯ ತಂಡಗಳು ತಲಾ 1-1 ಗೋಲುಗಳಿಂದ ಸಮಬಲ ಸಾಧಿಸಿದವು. ದ್ವಿತೀಯಾರ್ಧದಲ್ಲಿ ಎಟಿಕೆ ಆಕ್ರಮಣಕಾರಿ ನಿರ್ವಹಣೆ ಎದುರು ಬಿಎಫ್ಸಿ ಸಂಪೂರ್ಣ ಮಂಕಾಯಿತು.
ಅನುಭವಿ ಆಟಗಾರ ಡೇವಿಡ್ ವಿಲಿಯಮ್್ಸ (63, 79ನೇ ನಿಮಿಷ) ಅವಳಿ ಗೋಲು ಸಿಡಿಸಿದರು. 63ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ದಕ್ಕಿದ ಗೋಲಿನ ಲಾಭ ಪಡೆದರು. 3ನೇ ಬಾರಿಯೂ ಫೈನಲ್ಗೇರುವ ಉತ್ಸಾಹದಲ್ಲಿದ್ದ ಬಿಎಫ್ಸಿ ನಿರಾಸೆಯಲ್ಲಿ ಮುಳುಗಿತು.
ಸೌರವ್ ಗಂಗೂಲಿ ವೀಕ್ಷಣೆ
ಎಟಿಕೆ ಸಹ-ಮಾಲೀಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಂದ್ಯ ವೀಕ್ಷಿಸಿದರು. ಎಟಿಕೆ ಜಯ ದಾಖಲಿಸಿದ ಬಳಿಕ ಆಟಗಾರರ ಸಂಭ್ರಮದಲ್ಲಿ ಭಾಗಿಯಾದರು.