25ನೇ ಟೆಸ್ಟ್​ ಆತಿಥ್ಯಕ್ಕೆ ಸಜ್ಜಾದ ಬೆಂಗಳೂರು; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್​ ಎದುರು ಭಾರತ ಅಜೇಯ

web bang
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಚಿನ್ನಸ್ವಾಮಿ ಸ್ಟೇಡಿಯಂ 25ನೇ ಟೆಸ್ಟ್​ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಬುಧವಾರದಿಂದ ನಡೆಯಲಿರುವ ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್​ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯ, ಬೆಂಗಳೂರಿನಲ್ಲಿ ನಡೆಯಲಿರುವ 25ನೇ ಟೆಸ್ಟ್​ ಪಂದ್ಯವೆನಿಸಿದೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ರಜತೋತ್ಸವ ಕಂಡ ಭಾರತದ ಅಪರೂಪದ ಸ್ಟೇಡಿಯಂಗಳ ಪಟ್ಟಿಗೆ ಚಿನ್ನಸ್ವಾಮಿ ಸ್ಟೇಡಿಯಂ ಸೇರ್ಪಡೆಗೊಳ್ಳುತ್ತಿದೆ. ಪಂದ್ಯಕ್ಕೆ ಪೂರ್ವಭಾವಿಯಾಗಿ ಭಾರತ&ನ್ಯೂಜಿಲೆಂಡ್​ ತಂಡಗಳು ಸೋಮವಾರ ಕಠಿಣ ಅಭ್ಯಾಸ ಆರಂಭಿಸಿದವು.

ಬೆಂಗಳೂರಿನಲ್ಲಿ 1974ರಿಂದ ಇದುವರೆಗೆ ಆಯೋಜಿಸಿರುವ 24 ಪಂದ್ಯಗಳಲ್ಲಿ ಭಾರತ 9ರಲ್ಲಿ ಗೆದ್ದು, 6ರಲ್ಲಿ ಸೋತಿದೆ. ಉಳಿದ 9 ಟೆಸ್ಟ್​ಗಳು ಡ್ರಾಗೊಂಡಿವೆ. ಅಲ್ಲದೆ ನ್ಯೂಜಿಲೆಂಡ್​ ಎದುರು ಈ ಹಿಂದೆ ಬೆಂಗಳೂರಿನಲ್ಲಿ ಆಡಿರುವ ಮೂರು ಟೆಸ್ಟ್​ಗಳಲ್ಲೂ ಗೆದ್ದ ಅಜೇಯ ದಾಖಲೆ ಆತಿಥೇಯರದ್ದಾಗಿದೆ.

ಸುಮಾರು ಎರಡೂವರೆ ವರ್ಷಗಳ ಬಳಿಕ ಉದ್ಯಾನನಗರಿಯಲ್ಲಿ ಟೆಸ್ಟ್​ ಪಂದ್ಯ ನಡೆಯಲಿದೆ. 2022ರ ಮಾರ್ಚ್​ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯದಾಗಿ ಬೆಂಗಳೂರಿನಲ್ಲಿ ಟೆಸ್ಟ್​ ಆಡಿದ್ದ ಭಾರತ ತಂಡ, 238 ರನ್​ಗಳಿಂದ ಗೆಲುವು ಸಾಧಿಸಿತ್ತು.

ಭಾರತ ತಂಡ ಬೆಂಗಳೂರಿನಲ್ಲಿ ನ್ಯೂಜಿಲೆಂಡ್​ ಎದುರು 1988ರಲ್ಲಿ ಮೊದಲ ಟೆಸ್ಟ್​ ಆಡಿತ್ತು. ಕಿವೀಸ್​ ದಿಗ್ಗಜ ವೇಗಿ ರಿಚರ್ಡ್​ ಹ್ಯಾಡ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಆಗಿನ ಗರಿಷ್ಠ ವಿಕೆಟ್​ ಸರದಾರ ಎನಿಸಿದ್ದ ಈ ಪಂದ್ಯದಲ್ಲಿ ಭಾರತ 172 ರನ್​ಗಳಿಂದ ಗೆದ್ದು ಬೀಗಿತ್ತು. ನಂತರ 1995ರಲ್ಲಿ ಮತ್ತೆ ಕಿವೀಸ್​ ಎದುರು ಬೆಂಗಳೂರಿನಲ್ಲಿ 8 ವಿಕೆಟ್​ಗಳಿಂದ ಜಯಿಸಿತ್ತು. 2012ರಲ್ಲಿ ಕಿವೀಸ್​ ಎದುರು ಬೆಂಗಳೂರಿನಲ್ಲಿ ಕೊನೆಯದಾಗಿ ಆಡಿದಾಗ ಭಾರತ, 5 ವಿಕೆಟ್​ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತ್ತು. ಶತಕವೀರ ವಿರಾಟ್​ ಕೊಹ್ಲಿ ಪಂದ್ಯಶ್ರೇಷ್ಠರಾಗಿದ್ದರು. ಈಗಿನ ಕೋಚ್​ ಗೌತಮ್​ ಗಂಭೀರ್​ ಆಗ ತಂಡದ ಆರಂಭಿಕರಾಗಿದ್ದರು. ಆ ಪಂದ್ಯದಲ್ಲಿ ಆಡಿದ್ದ ಮೂವರು ಆಟಗಾರರಷ್ಟೇ (ಕೊಹ್ಲಿ, ಅಶ್ವಿನ್​, ಸೌಥಿ) ಈ ಸಲವೂ ಕಣಕ್ಕಿಳಿಯಲಿದ್ದಾರೆ.

*5: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ 25 ಟೆಸ್ಟ್​ ಪಂದ್ಯಗಳಿಗೆ ಆತಿಥ್ಯ ವಹಿಸಿದ ಭಾರತದ 5ನೇ ಸ್ಟೇಡಿಯಂ ಎನಿಸಲಿದೆ. ಇದುವರೆಗಿನ ಸ್ಟೇಡಿಯಂಗಳೆಂದರೆ ಈಡನ್​ ಗಾರ್ಡನ್ಸ್​, ಕೋಲ್ಕತ (42), ಚಿದಂಬರಂ, ಚೆನ್ನೈ (35), ಅರುಣ್​ ಜೇಟ್ಲಿ ಸ್ಟೇಡಿಯಂ, ನವದೆಹಲಿ (35), ವಾಂಖೆಡೆ, ಮುಂಬೈ (26).

ಮೂವರು ವೇಗಿಗಳು ಕಣಕ್ಕೆ?

ಆಸ್ಟ್ರೆಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಭಾರತ ತಂಡ ಬೆಂಗಳೂರಿನಲ್ಲೂ ವೇಗದ ಬೌಲಿಂಗ್​ ಸ್ನೇಹಿ ಪಿಚ್​ನಲ್ಲಿ ಆಡುವ ನಿರೀೆ ಇದ್ದು, ಮೂವರು ವೇಗಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​ನಂತೆ ಮತ್ತೆ ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​, ಆಕಾಶ್​ದೀಪ್​ರನ್ನು ಬೆಂಗಳೂರಿನಲ್ಲೂ ಕಣಕ್ಕಿಳಿಸುವ ಲೆಕ್ಕಾಚಾರವಿದೆ. ಅಲ್ಲದೆ ಪಿಚ್​ ಮೇಲಿನ ಸ್ವಲ್ಪ ಹಸಿರು ಹುಲ್ಲು ಮತ್ತು ಬೆಂಗಳೂರಿನ ಮೋಡಕವಿದ ವಾತಾವರಣ ಮತ್ತು ಮಳೆ ವೇಗದ ಬೌಲರ್​ಗಳಿಗೆ ಅನುಕೂಲಕರವೆನಿಸಿದೆ. ಆದರೆ ಇತ್ತೀಚೆಗೆ ಲಂಕಾದಲ್ಲಿ ಆಡಿದ 2 ಟೆಸ್ಟ್​ಗಳಲ್ಲಿ ಕಿವೀಸ್​ 37 ವಿಕೆಟ್​ಗಳನ್ನು ಸ್ಪಿನ್ನರ್​ಗಳಿಗೇ ಒಪ್ಪಿಸಿತ್ತು. ಇದು ಭಾರತಕ್ಕೆ ಅಕ್ಷರ್​ ಪಟೇಲ್​ ಅಥವಾ ಕುಲದೀಪ್​ ಯಾದವ್​ರನ್ನು 3ನೇ ಸ್ಪಿನ್ನರ್​ ಆಗಿ ಆಡಿಸುವ ಪ್ರಚೋದನೆಯನ್ನೂ ನೀಡುತ್ತಿದೆ. ಹೀಗಾಗಿ ಬುಧವಾರ ಬೆಳಗ್ಗೆ ಟಾಸ್​ ಸಮಯದವರೆಗೂ ಭಾರತದ ಆಡುವ 11ರ ಬಳಗದ ಬಗ್ಗೆ ಗೊಂದಲ ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net