

ಹಾಲಿ ರಾಷ್ಟ್ರೀಯ ಚಾಂಪಿಯನ್ ಕರ್ನಾಟಕದ ನಿಕ್ಕಿ ಪೂಣಚ್ಚ ವೃತ್ತಿಜೀವದ ಅತಿದೊಡ್ಡ ಗೆಲುವನ್ನು ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಪಡೆದುಕೊಂಡಿದ್ದಾರೆ. ವೈಲ್ಡ್ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದ 24 ವರ್ಷದ ನಿಕ್ಕಿ ಪೂಣಚ್ಚ 16ನೇ ಶ್ರೇಯಾಂಕದ ಆಟಗಾರ ಹಾಗೂ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ ತಮಗಿಂತ 570 ಸ್ಥಾನ ಮೇಲಿರುವ ಜೆಕ್ ಗಣರಾಜ್ಯದ ಆಟಗಾರ ಲೂಕಾಸ್ ರಸೂಲ್ರನ್ನು ಹೊರಹಾಕಿ ಪ್ರಿ ಕ್ವಾರ್ಟರ್ಫೈನಲ್ ಸಾಧನೆ ಮಾಡಿದರು.
ಕೆಎಸ್ಎಲ್ಟಿಎಯ ಕೋರ್ಟ್-1ರಲ್ಲಿ ಮಂಗಳವಾರ ನಡೆದ 1 ಗಂಟೆ 45 ನಿಮಿಷದ ಪಂದ್ಯದಲ್ಲಿ ನಿಕ್ಕಿ ಪೂಣಚ್ಚ 6-4, 2-6, 6-3 ರಿಂದ ರಸೂಲ್ರನ್ನು ಸೋಲಿಸಿದರು. ಹಿಂದೊಮ್ಮೆ ವಿಶ್ವ ರ್ಯಾಂಕಿಂಗ್ನಲ್ಲಿ 26ನೇ ಸ್ಥಾನದವರೆಗೂ ಏರಿದ್ದ ರಸೂಲ್, 2012ರ ವಿಂಬಲ್ಡನ್ನಲ್ಲಿ ದಿಗ್ಗಜ ಆಟಗಾರ ರಾಫೆಲ್ ನಡಾಲ್ರನ್ನು ಮಣಿಸಿದ ಶ್ರೇಯವನ್ನು ಹೊಂದಿದ್ದಾರೆ.
ದಿನದ ಇನ್ನೊಂದು ಪಂದ್ಯದಲ್ಲಿ ಕಳೆದ ವರ್ಷದ ರನ್ನರ್ಅಪ್ ಸಾಕೇತ್ ಮೈನೇನಿ 6-3, 6-3 ರಿಂದ ರಷ್ಯಾದ 6ನೇ ಶ್ರೇಯಾಂಕದ ಆಟಗಾರ ಎವೆಗ್ನಿ ಡೊನ್ಸ್ಕೊಯ್ರನ್ನು ಮಣಿಸುವ ಮೂಲಕ ಪ್ರಿ ಕ್ವಾರ್ಟರ್ಫೈನಲ್ ಸಾಧನೆ ಮಾಡಿದರೆ, ಅರ್ಹತಾ ಸುತ್ತಿನಿಂದ ಬಂದ ಆಟಗಾರ ಅಭಿನವ್ ಷಣ್ಮುಗಂ 7-5, 6-3 ರಿಂದ ಜರ್ಮನಿಯ ಡೇನಿಯಲ್ ಮಸೂರ್ರನ್ನು ಹೊರಗಟ್ಟಿದರು. 8ನೇ ಶ್ರೇಯಾಂಕದ ಆಟಗಾರ ಸುಮಿತ್ ನಗಾಲ್ 6-0, 6-4 ರಿಂದ ಟುನೇಷಿಯಾದ ಮಾಲೆಕ್ ಜಜರಿಯನ್ನು ಸೋಲಿಸಿ 16ರ ಘಟ್ಟದ ಸಾಧನೆ ಮಾಡಿದರು.
ಚಾಲೆಂಜರ್ ಟೂರ್ನಿಯಲ್ಲಿ ಈ ಹಂತಕ್ಕೇರಿದ್ದರಿಂದ ಥ್ರಿಲ್ ಆಗಿದ್ದೇನೆ. ಕಳೆದ ವರ್ಷದಿಂದಲೂ ಇದೊಂದು ಕನಸು ನನ್ನಲ್ಲಿತ್ತು. ಅದರಲ್ಲೂ ಶ್ರೇಯಾಂಕಿತ ಆಟಗಾರರೊಬ್ಬರನ್ನು ಸೋಲಿಸಿ ಈ ಹಂತಕ್ಕೇರಿರುವುದು ಇನ್ನಷ್ಟು ಸಂಭ್ರಮಕ್ಕೆ ಕಾರಣವಾಗಿದೆ. ಮುಂದಿನ ಸುತ್ತಿನಲ್ಲಿ ಯಾರ ವಿರುದ್ಧ ಆಡುತ್ತೇನೆ ಎನ್ನುವುದು ತಿಳಿದಿಲ್ಲ. ಆದರೆ, ಈ ಗೆಲುವು ನನಗೆ ಬಹಳ ವಿಶ್ವಾಸ ನೀಡಿದೆ. | ನಿಕ್ಕಿ ಪೂಣಚ್ಚ
ಬ್ಲಾಜ್ ಕ್ಯಾವಿಸಿಕ್ರನ್ನು ಮೊದಲ ಪಂದ್ಯದಲ್ಲಿ ಮಣಿಸಿ ಅಚ್ಚರಿ ನೀಡಿದ್ದ ಸಸಿಕುಮಾರ್ ಮುಕುಂದನ್ 5-7, 3-6 ರಿಂದ ಬೆಲಾರಸ್ನ ಇಲ್ಯಾ ಇವಾಶ್ಕಗೆ ಶರಣಾಗಿ ಹೊರನಡೆದರು. ಸ್ಟೆಫಾನೋ ಟ್ರಾವಾಗ್ಲಿಯಾ, ಯೂಚಿ ಸುಗಿತಾ, ಥಾಮಸ್ ಫ್ಯಾಬಿಯಾನೋ ಹಾಗೂ ಬ್ಲಾಜ್ ರೋಲಾ ಮುನ್ನಡೆ ಕಂಡ ಪ್ರಮುಖರು. ಡಬಲ್ಸ್ ವಿಭಾಗದಲ್ಲಿ ಪೂರವ್ ರಾಜಾ, ರಾಮ್ುಮಾರ್ ರಾಮನಾಥನ್ ಜೋಡಿ 6-2, 6-2 ರಿಂದ ಪ್ರಜ್ವಲ್ ದೇವ್ ಹಾಗೂ ಆದಿಲ್ ಕಲ್ಯಾಣ್ಪುರ್ ಜೋಡಿಯನ್ನು ಸೋಲಿಸಿ 2ನೇ ಸುತ್ತಿಗೇರಿತು.
ವೃತ್ತಿಜೀವನದ ಕೊನೇ ಟೆನಿಸ್ ಋತುವಿನಲ್ಲಿ ಭಾಗಿಯಾಗಿರುವ ಲಿಯಾಂಡರ್ ಪೇಸ್ಗೆ ಬೆಂಗಳೂರು ಓಪನ್ ಟೂರ್ನಿ ತವರಿನಲ್ಲಿ ಕೊನೇ ಟೂರ್ನಿ ಎನಿಸಿದೆ. ಮಂಗಳವಾರ ಅಭ್ಯಾಸದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಅವರು ಭಾವುಕರಾದರು. ‘ಎಲ್ಲ ಒಳ್ಳೆಯ ಸಂಗತಿಗಳಿಗೂ ಒಂದು
ಕೊನೆ ಎನ್ನುವುದು ಇರುತ್ತದೆ. ತ್ರಿವರ್ಣ ಧ್ವಜವನ್ನು ಹೃದಯದಲ್ಲಿಟ್ಟಿಕೊಂಡು ಇಷ್ಟು ವರ್ಷ ಆಡಿದ್ದೇನೆ. ನನ್ನೆಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕು ಎನ್ನುವ ಕಾರಣಕ್ಕಾಗಿ ಈ ಎಟಿಪಿ ಟೂರ್ನಲ್ಲಿ ಭಾಗಿಯಾಗಿದ್ದೇನೆ’ ಎಂದು ಭಾವುಕರಾಗಿ ನುಡಿದರು. ತಮ್ಮ ಕೊನೇ ಟೆನಿಸ್ ಋತುವಿಗಾಗಿ ವಿಶೇಷ ಟಿ-ಶರ್ಟ್ ಕೂಡ ಧರಿಸಿದ್ದ ಪೇಸ್, ಅದರ ಹಿಂಬದಿಯಲ್ಲಿ ತಾವು ಈವರೆಗೂ ಗೆದ್ದ ಪ್ರಶಸ್ತಿಗಳ ವಿವರಗಳನ್ನು ಪ್ರಿಂಟ್ ಮಾಡಿಸಿದ್ದಾರೆ.
| ಸಂತೋಷ್ ನಾಯ್ಕ್, ಬೆಂಗಳೂರು