

ಬೆಂಗಳೂರು: ವೃತ್ತಿಜೀವನದಲ್ಲಿ ಆಟಕ್ಕಿಂತ ಹೆಚ್ಚಾಗಿ ಗಾಯದಿಂದಲೇ ಸುದ್ದಿಯಾಗಿದ್ದ ಸಾಕೇತ್ ಮೈನೇನಿ ಸುಲಭ ಗೆಲುವಿನೊಂದಿಗೆ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ 2ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಚೆನ್ನೈನ ಆಟಗಾರ ಸಸಿಕುಮಾರ್ ಮುಕುಂದನ್, ವಿಶ್ವ ರ್ಯಾಂಕಿಂಗ್ನಲ್ಲಿ 275ನೇ ಸ್ಥಾನದಲ್ಲಿರುವ ಸ್ಲೊವೇನಿಯಾ ಆಟಗಾರ ಬ್ಲಾಜ್ ಕ್ಯಾವಿಸಿಕ್ರನ್ನು ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದರು.
ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ಸೋಮವಾರ ಆರಂಭವಾದ ಟೂರ್ನಿಯಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 289ನೇ ಸ್ಥಾನದಲ್ಲಿರುವ ಸಸಿಕುಮಾರ್ ಮುಕುಂದನ್ 2-6, 6-3, 6-4 ಸೆಟ್ಗಳಿಂದ 21 ಬಾರಿ ಗ್ರಾಂಡ್ ಸ್ಲಾಂನಲ್ಲಿ ಪ್ರಧಾನ ಸುತ್ತಿನಲ್ಲಿ ಆಡಿದ ಅನುಭವ ಇರುವ ಕ್ಯಾವಿಸಿಕ್ರನ್ನು ಟೂರ್ನಿಯಿಂದ ಹೊರಹಾಕಿದರು.
ಪ್ರಧಾನ ಕೋರ್ಟ್ನಲ್ಲಿ ನಡೆದ ಪಂದ್ಯದ ಆರಂಭಿಕ ಸೆಟ್ನಲ್ಲಿ ಕೆಟ್ಟ ನಿರ್ವಹಣೆ ತೋರಿ ಶರಣಾಗಿದ್ದ ಸಸಿಕುಮಾರ್, ನಂತರದ ಎರಡೂ ಸೆಟ್ನಲ್ಲಿ ದಿಟ್ಟ ನಿರ್ವಹಣೆ ತೋರುವ ಮೂಲಕ ಗೆಲುವು ದಾಖಲಿಸಿದರು. ‘ಪಂದ್ಯ ಆಡಲು ತೆರಳುವ ವೇಳೆಗಾಗಲೇ ನನ್ನ ತಲೆಯಲ್ಲಿ ಸಾಕಷ್ಟು ಯೋಚನೆಗಳು ಸುಳಿದಾಡುತ್ತಿದ್ದವು. ಸೋಲು ಕಾಣುವ ಭೀತಿಯೇ ನನ್ನಲ್ಲಿತ್ತು. ಅದರಲ್ಲೂ ಮೊದಲ ಸೆಟ್ ಸೋತ ಬಳಿಕ, ಇನ್ನೇನು ಪಂದ್ಯದ ಸೋಲು ಸನಿಹವಾಯಿತು ಎಂದು ಅಂದುಕೊಂಡಿದ್ದೆ. ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳನ್ನು ಎದುರಿಸಲು ಮಾನಸಿಕವಾಗಿ ತಯಾರಾಗುತ್ತಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಗೆಲುವಿಗೆ ಅರ್ಹನಾಗಿರಲಿಲ್ಲ. ಇದು ಬಹುಮಾನದ ರೀತಿ ಬಂದಿದೆ’ ಎಂದು ಪಂದ್ಯದ ಬಳಿಕ ಹೇಳಿದರು.
ಭಾರತದ ಮತ್ತೊಬ್ಬ ಆಟಗಾರ ವಿಶ್ವ ರ್ಯಾಂಕಿಂಗ್ನಲ್ಲಿ 390ನೇ ಸ್ಥಾನದಲ್ಲಿರುವ ಸಾಕೇತ್ ಮೈನೇನಿ ಬಹಳ ಸರಳ ಮೊದಲ ಸುತ್ತಿನ ಗೆಲುವು ದಾಖಲಿಸಿದರು. ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ ಕಳೆದ ವರ್ಷದ ರನ್ನರ್ಅಪ್ 32 ವರ್ಷದ ಸಾಕೇತ್ 6-3, 6-3ರಿಂದ ರಷ್ಯಾದ ಅಸ್ಲಾನ್ ಕರಾಟ್ಸೆವ್ರನ್ನು ಸೋಲಿಸಿದರು. ದಿನದ ಇನ್ನೊಂದು ಪಂದ್ಯದಲ್ಲಿ ರಾಷ್ಟ್ರೀಯ ಚಾಂಪಿಯನ್ ಕರ್ನಾಟಕದ ನಿಕ್ಕಿ ಪೂಣಚ್ಚ 6-4, 6-7 (5), 7-6 (4) ರಿಂದ ಬೆಂಗಳೂರಿನವರೇ ಆದ ಆದಿಲ್ ಕಲ್ಯಾಣ್ಪುರ್ರನ್ನು ಸೋಲಿಸಿ ಮುನ್ನಡೆದರು. ಇನ್ನೊಬ್ಬ ಆಟಗಾರ ಸಿದ್ಧಾರ್ಥ್ ರಾವತ್ 3-6, 7-6 (7), 7-6 ರಿಂದ ಕ್ರೋವೇಷಿಯಾದ ಆಟಗಾರ ಬೊರ್ನಾ ಗೊಜೊರನ್ನು ಸೋಲಿಸಿ 2ನೇ ಸುತ್ತಿಗೆ ಪ್ರವೇಶ ಪಡೆದರು.
ಮೊದಲ ದಿನ ಕಣದಲ್ಲಿದ್ದ ಇತರ ಭಾರತೀಯ ಪೈಕಿ ಅರ್ಜುನ್ ಖಾಡೆ, ಸೂರಜ್ ಪ್ರಭೋದ್, ಪ್ರಜ್ವಲ್ ದೇವ್ ಸೋಲು ಕಂಡರು. ಪ್ರಜ್ವಲ್ ದೇವ್ 2-6, 1-6 ರಿಂದ ಉಜ್ಬೇಕಿಸ್ತಾನದ ಖುಮ್ೂನ್ ಸುಲ್ತಾನೋವ್ಗೆ ಶರಣಾದರೆ, ಸೂರಜ್ ಪ್ರಭೋದ್ 2-6, 2-6 ರಿಂದ ಉಕ್ರೇನ್ನ ವ್ಲಾಡಿಸ್ಲಾವ್ ಓಲೋವ್ಗೆ ಸೋತರು. ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದ ಅರ್ಜುನ್ ಖಾಡೆ 2-6, 6-7 ರಿಂದ ಟುನೇಷಿಯಾದ ಮಾಲೆಕ್ ಜಜರಿಗೆ ಸೋತರು. ಉಳಿದಂತೆ ಮ್ಯಾಥ್ಯೂ ಎಡ್ಬನ್, ಫೆಡ್ರಿಸಿಯೋ ಸಿಲ್ವಾ, ಲೌರೆಂಟ್ ಲೊಕೊಲಿ, ಫಿಲಿಪ್ಪೋ ಬ್ಲಾಡಿ ಹಾಗೂ ವಾಕ್ಲಾವ್ ಸಾಫ್ರಾನೆಕ್ ಗೆಲುವು ಸಾಧಿಸಿದರು.