

ಬೆಂಗಳೂರು: ಮೂರನೇ ಆವೃತ್ತಿಯ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದೆ. ವಿಶ್ವ ರ್ಯಾಂಕಿಂಗ್ನಲ್ಲಿ ಉತ್ತಮ ಸ್ಥಾನದಲ್ಲಿರುವ ಬಹಳ ಆಟಗಾರರು ಟೂರ್ನಿಯಲ್ಲಿ ಆಡುತ್ತಿರುವ ಕಾರಣ, ಇತ್ತೀಚಿನ ವರ್ಷಗಳಲ್ಲಿ ಚಾಲೆಂಜರ್ ಟೂರ್ನಿಯ ಕಣದಲ್ಲಿರುವ ಬಲಿಷ್ಠ ಡ್ರಾ ಎನಿಸಿದೆ. ಹಾಲಿ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಕಳೆದ ಆವೃತ್ತಿಯ ಫಲಿತಾಂಶವನ್ನು ಪುನರಾವರ್ತನೆ ಮಾಡುವ ಇರಾದೆಯಲ್ಲಿದ್ದರೆ, ಅವರಿಗೆ ಸವಾಲು ನೀಡಲು 2017ರ ಆವೃತ್ತಿಯ ಚಾಂಪಿಯನ್ ಸುಮಿತ್ ನಗಾಲ್ ಇದ್ದಾರೆ. ಭಾರತೀಯ ಟೆನಿಸ್ನ ದಿಗ್ಗಜ ಆಟಗಾರ ಲಿಯಾಂಡರ್ ಪೇಸ್ ತವರಿನಲ್ಲಿ ಆಡಲಿರುವ ವೃತ್ತಿಜೀವನದ ಕೊನೇ ಟೆನಿಸ್ ಟೂರ್ನಿ ಇದಾಗಿದೆ.
‘ಕಳೆದ ವಾರ ಪುಣೆ ಎಟಿಪಿ ಟೂರ್ನಿಯಲ್ಲಿ ಆಡಿದ ಎಲ್ಲ ಆಟಗಾರರು ಬೆಂಗಳೂರು ಓಪನ್ನಲ್ಲೂ ಆಡುತ್ತಿದ್ದಾರೆ. ಹಾಗಾಗಿ ನಾನು ದೊಡ್ಡ ಮಟ್ಟದ ಸವಾಲನ್ನು ಈ ಬಾರಿ ಎದುರು ನೋಡುತ್ತಿದ್ದೇನೆ’ ಎಂದು ವಿಶ್ವ ರ್ಯಾಂಕಿಂಗ್ನಲ್ಲಿ 122ನೇ ಸ್ಥಾನದಲ್ಲಿರುವ ಭಾರತದ ಅಗ್ರ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಹೇಳಿದ್ದಾರೆ. ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ ಕೋರ್ಟ್ನಲ್ಲಿ ನಡೆಯಲಿರುವ ಟೂರ್ನಿಗೆ ಈಗಾಗಲೇ ಭಾರತದ 6 ಆಟಗಾರರು ಪ್ರಧಾನ ಸುತ್ತಿಗೆ ನೇರ ಅರ್ಹತೆ ಪಡೆದುಕೊಂಡಿದ್ದಾರೆ. ಅದರೊಂದಿಗೆ ಐವರು ಆಟಗಾರರು ವೈಲ್ಡ್ಕಾರ್ಡ್ ಪ್ರವೇಶ ಪಡೆದುಕೊಂಡಿರುವ ಕಾರಣ, ಪ್ರಧಾನ ಸುತ್ತಿನಲ್ಲಿರುವ 48 ಆಟಗಾರರ ಪೈಕಿ 11 ಆಟಗಾರರು ಭಾರತೀಯರಾಗಿದ್ದಾರೆ. ಅಗ್ರ ಶ್ರೇಯಾಂಕದ ಆಟಗಾರ ರಿಚರ್ಡ್ಸ್ ಬೆರಾಕಿನ್ಸ್ ಅನಾರೋಗ್ಯದ ಕಾರಣ ನೀಡಿ ಟೂರ್ನಿಯಿಂದ ಹಿಂದೆ ಸರಿದಿದ್ದರೂ, ಉತ್ತಮ ಫಾರ್ಮ್ನಲ್ಲಿರುವ ಆಟಗಾರರು ಸ್ಪರ್ಧೆಯಲ್ಲಿರುವುದು ಟೂರ್ನಿಯ ರೋಚಕತೆಯನ್ನು ಹೆಚ್ಚಿಸಲಿದೆ. ಪ್ರಸ್ತುತ ವಿಶ್ವ ರ್ಯಾಂಕಿಂಗ್ನಲ್ಲಿ 125ನೇ ಸ್ಥಾನದಲ್ಲಿರುವ ನಗಾಲ್, ಇಲ್ಲಿ 8ನೇ ಶ್ರೇಯಾಂಕದ ಆಟಗಾರನಾಗಿದ್ದಾರೆ.
ಟೂರ್ನಿ ಒಟ್ಟು 1.16 ಕೋಟಿ ರೂ. ಬಹುಮಾನ ಮೊತ್ತದಲ್ಲಿ ನಡೆಯಲಿದ್ದು, ಚಾಂಪಿಯನ್ ಆಟಗಾರ 15.44 ಲಕ್ಷ ರೂ. ಬಹುಮಾನ ಹಾಗೂ 125 ರ‍್ಯಾಂಕಿಂಗ್ ಅಂಕ ಗೆದ್ದುಕೊಳ್ಳಲಿದ್ದಾರೆ. ರನ್ನರ್ಅಪ್ ಆಟಗಾರ 9 ಲಕ್ಷ ರೂ. ಹಾಗೂ 75 ರ‍್ಯಾಂಕಿಂಗ್ ಅಂಕ ಜಯಿಸಿದ್ದಾರೆ. ಸೆಮಿಫೈನಲಿಸ್ಟ್ ಗಳು ತಲಾ 5.30 ಲಕ್ಷ ರೂ. ಹಾಗೂ 45 ರ‍್ಯಾಂಕಿಂಗ್ ಅಂಕ ಸಂಪಾದಿಸಲಿದ್ದಾರೆ.
ಭಾರತೀಯ ಟೆನಿಸ್ನ ದಿಗ್ಗಜ ಆಟಗಾರ 46 ವರ್ಷದ ಲಿಯಾಂಡರ್ ಪೇಸ್ಗೆ ಇದು ತವರಿನ ಕೊನೇ ಟೂರ್ನಿ ಆಗಿರಲಿದೆ. ಇದು ಪೇಸ್ನ ಕೊನೆಯ ವೃತ್ತಿಪರ ಟೆನಿಸ್ ಋತು ಆಗಿದ್ದು, ಋತುವಿನ ಅಂತ್ಯಕ್ಕೆ 30 ವರ್ಷಗಳ ಕ್ರೀಡಾಜೀವನಕ್ಕೆ ವಿದಾಯ ಹೇಳಲಿದ್ದಾರೆ. ವೈಲ್ಡ್ಕಾರ್ಡ್ ಮೂಲಕ ಅವರು ಈ ಟೂರ್ನಿಯಲ್ಲಿ ಆಡಲಿದ್ದಾರೆ.