ಬೆಂಗಳೂರು ಐಟಿಎಫ್​​ ಮಹಿಳಾ ಟೆನಿಸ್​: ಇಂದು ಆಕಾಂಕ್ಷಾ-ತನಿಷಾ ಫೈನಲ್ ಫೈಟ್​​

web ten
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಭಾರತದ ಆಕಾಂಕ್ಷಾ ನಿಟ್ಟುರೆ ಮತ್ತು ತನಿಷಾ ಕಶ್ಯಪ್​ ಎಸ್​ಕೆಎಂಇ ಐಟಿಎಫ್​ ಓಪನ್​ ಮಹಿಳಾ ಟೆನಿಸ್​ ಟೂರ್ನಿಯ ಸಿಂಗಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೇರಿದ್ದಾರೆ. ಇದರೊಂದಿಗೆ ಭಾನುವಾರ ಬೆಳಗ್ಗೆ 9 ಗಂಟೆಗೆ ಆಲ್​ ಇಂಡಿಯನ್​ ಫೈನಲ್​ ಪಂದ್ಯ ನಿಗದಿಯಾಗಿದೆ.

ಕೆಎಸ್​ಎಲ್​ಟಿಎ ಸ್ಟೇಡಿಯಂನಲ್ಲಿ ಶನಿವಾರ ನಡೆದ ಸೆಮಿಫೈನಲ್​ನಲ್ಲಿ 7ನೇ ಶ್ರೇಯಾಂಕಿತೆ ಆಕಾಂಕ್ಷಾ ನಿಟ್ಟುರೆ 2ನೇ ಶ್ರೇಯಾಂಕಿತೆ ವೈಷ್ಣವಿ ಅದ್ಕರ್​ಗೆ 7-5, 3-6, 6-2 ಸೆಟ್​ಗಳಿಂದ ಆಘಾತಕಾರಿ ಸೋಲುಣಿಸಿದರು. ಮಳೆಯಿಂದಾಗಿ ಸುಮಾರು 3 ಗಂಟೆಗಳ ಕಾಲ ಅಡಚಣೆ ಎದುರಿಸಿದ ಪಂದ್ಯದಲ್ಲಿ ಆಕಾಂಕ್ಷಾ ಮೊದಲ ಸೆಟ್​ ಗೆದ್ದು ಬೀಗಿದರೂ, 2ನೇ ಸೆಟ್​ನಲ್ಲಿ ತಿರುಗೇಟು ಎದುರಿಸಿದರು. ಆದರೆ ನಿರ್ಣಾಯಕ ಸೆಟ್​ನಲ್ಲಿ ಗೆದ್ದು ಬೀಗಿದ ಆಕಾಂಕ್ಷಾ ಐಟಿಎಫ್​ ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್​ ಪ್ರವೇಶಿಸಿದರು. 2 ವರ್ಷಗಳ ಹಿಂದೆ ಅಹಮದಾಬಾದ್​ನಲ್ಲಿ ಸೆಮಿಫೈನಲ್​ನಲ್ಲಿ ಆಡಿದ್ದೇ ಅವರ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ 8ನೇ ಶ್ರೇಯಾಂಕಿತೆ ತನಿಷಾ ಕಶ್ಯಪ್​ ನ್ಯೂ ಕ್ಯಾಲೆಡೋನಿಯಾದ ಕ್ಯಾರೊಲಾನ್​ ಡೆಲೌನಯ್​ ವಿರುದ್ಧ 6-1, 7-5 ನೇರಸೆಟ್​ಗಳಿಂದ ಸುಲಭ ಗೆಲುವು ಸಾಧಿಸಿದರು.

ಡಬಲ್ಸ್​ಗೆ ಮಳೆ ಅಡಚಣೆ: ಡಬಲ್ಸ್​ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಹುಮೆರಾ ಬಹರ್ಮಸ್​-ಪೂಜಾ ಇಂಗಲೆ ಜೋಡಿ ಫೈನಲ್​ ಪ್ರವೇಶಿಸಿದೆ. ಹುಮೆರಾ-ಪೂಜಾ ಜೋಡಿ ಸೆಮಿಫೈನಲ್​ನಲ್ಲಿ ಸಾಯಿ ಸಂಹಿತಾ-ದಿವಾ ಭಾಟಿಯಾ ಜೋಡಿಯನ್ನು 7-6, 6-4ರಿಂದ ಪರಾಭವಗೊಳಿಸಿತು. 2ನೇ ಸೆಮಿಫೈನಲ್​ ಪಂದ್ಯ ಮಳೆ ಅಡಚಣೆ ಎದುರಿಸಿದ ಕಾರಣ ಭಾನುವಾರಕ್ಕೆ ಮುಂದೂಡಲ್ಪಟ್ಟಿತು. ಮಳೆಯಿಂದಾಗಿ ಪಂದ್ಯ ನಿಂತಾಗ ಆಕಾಂಕ್ಷಾ ಮತ್ತು ಕರ್ನಾಟಕದ ಸೋಹಾ ಸಾಧಿಕ್​ ಜೋಡಿ ಅರಿನಾ ಆರಿುಲಿನಾ-ಜೋ ಲೀನ್​ ಸಾ ಜೋಡಿಯ ಎದುರು 5-4ರಿಂದ ಮುನ್ನಡೆಯಲ್ಲಿತ್ತು. ಭಾನುವಾರ ಬೆಳಗ್ಗೆ 10.30ರಿಂದ ಸೆಮೀಸ್​ ನಡೆದ ನಂತರ ಮಧ್ಯಾಹ್ನ 12ರಿಂದ ಡಬಲ್ಸ್​ ವಿಭಾಗದ ಫೈನಲ್​ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net