ಬೆಂಗಳೂರು 2ನೇ ಬಾರಿ ಪಿಬಿಎಲ್ ಚಾಂಪಿಯನ್

PTI 9 Feb 20
Published on

ಹೈದರಾಬಾದ್: ನಾರ್ಥ್​ಈಸ್ಟರ್ನ್ ವಾರಿಯರ್ಸ್ ತಂಡದ ಪ್ರಬಲ ಹೋರಾಟವನ್ನು ಶಿಸ್ತಿನ ನಿರ್ವಹಣೆಯ ಮೂಲಕ ತಡೆಹಿಡಿದ ಬೆಂಗಳೂರು ರ್ಯಾಪ್ಟರ್ಸ್ ತಂಡ ಐದನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟವೇರಿದೆ. ಆ ಮೂಲಕ ಪಿಬಿಎಲ್ ಇತಿಹಾಸದಲ್ಲಿ ಟ್ರೋಫಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಮೊದಲ ತಂಡ ಎನ್ನುವ ಗೌರವ ಸಂಪಾದಿಸಿದೆ.

ಜಿಎಂಸಿ ಬಾಲಯೋಗಿ ಒಳಾಂಗಣ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ರ್ಯಾಪ್ಟರ್ಸ್ ತಂಡ 4-2ರಿಂದ ನಾರ್ಥ್​ಈಸ್ಟರ್ನ್ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತು.

ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಬೆಂಗಳೂರು ತಂಡದ ಬಿ.ಸಾಯಿ ಪ್ರಣೀತ್ 14-15, 15-9, 15-3 ರಿಂದ ನಾರ್ಥ್ ಈಸ್ಟರ್ನ್ ತಂಡದ ಲೀ ಚೀಯುಕ್ ಯುರನ್ನು ಸೋಲಿಸುವ ಮೂಲಕ ತಂಡಕ್ಕೆ ಮೊದಲ ಅಂಕ ತಂದುಕೊಟ್ಟಿದ್ದರು. ಆ ಬಳಿಕ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ನಾರ್ಥ್ ಈಸ್ಟರ್ನ್ ಟ್ರಂಪ್ ಪಂದ್ಯವಾಗಿ ಆಡಿತು. ಬೊಡಿನ್ ಇಸ್ಸಾರ ಹಾಗೂ ಲೂಈ ಯಾಂಗ್ ಡೇ 15-11, 13-15, 15-14 ರಿಂದ ಬೆಂಗಳೂರಿನ ಅರುಣ್ ಜಾರ್ಜ್ ಹಾಗೂ ರಿಯಾನ್ ಸುಪುತ್ರೋ ಜೋಡಿಯನ್ನು ಮಣಿಸಿದ್ದರಿಂದ ನಾರ್ಥ್ ಈಸ್ಟರ್ನ್ 2-1 ಮುನ್ನಡೆಗೇರಿತು. ನಂತರದ ಮಹಿಳಾ ಸಿಂಗಲ್ಸ್​ನಲ್ಲಿ ರ್ಯಾಪ್ಟರ್ಸ್ ತಂಡದ ತೈ ಜು ಯಿಂಗ್ 15-9, 15-12 ರಿಂದ ಮಿಚೆಲ್ ಲೀಯನ್ನು ಮಣಿಸಿ ಸಮಬಲಕ್ಕೆ ಕಾರಣರಾದರು. ಬೆಂಗಳೂರು ತಂಡ ಮಿಶ್ರ ಡಬಲ್ಸ್​ಅನ್ನು ಟ್ರಂಪ್ ಮ್ಯಾಚ್ ಆಗಿ ಆಡಲಿದ್ದ ಕಾರಣ, ಅಂತಿಮ ಪುರುಷರ ಸಿಂಗಲ್ಸ್ ಮುಖಾಮುಖಿ ಮಹತ್ವ ಕಳೆದುಕೊಂಡಿತು.

ಪ್ರಮುಖವಾಗಿದ್ದ ಮಿಶ್ರ ಡಬಲ್ಸ್​ನಲ್ಲಿ ಬೆಂಗಳೂರಿನ ಚಾನ್ ಪೆಂಗ್ ಸೂನ್ ಹಾಗೂ ಎಮ್ ಹ್ಯೂ ವೊನ್ ಜೋಡಿ 15-14, 14-15, 15-12 ಅಂತರದಿಂದ ಕೃಷ್ಣ ಪ್ರಸಾದ್ ಹಾಗೂ ಕಿಮ್ ಹಾ ನಾ ಜೋಡಿಯನ್ನು ಸೋಲಿಸಿ ಸತತ 2ನೇ ಬಾರಿ ಚಾಂಪಿಯನ್ ಆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net