ಸೌರಾಷ್ಟ್ರಕ್ಕೆ ಬಂಗಾಳ ಬೌಲರ್​ಗಳ ನಿಯಂತ್ರಣ: ಪ್ರವಾಸಿಗರಿಂದ ಬಿಗಿ ಬೌಲಿಂಗ್ ದಾಳಿ, ಬಾರೋಟ್, ವಿಶ್ವರಾಜ್ ಅರ್ಧಶತಕ

SOURASHTRA
Published on

ರಾಜ್​ಕೋಟ್: ಬಂಗಾಳದ ಶಿಸ್ತುಬದ್ಧ ಬೌಲಿಂಗ್ ದಾಳಿ ಎದುರು ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಫೈನಲ್​ನಲ್ಲಿ ರನ್​ಗಾಗಿ ಪರದಾಟ ನಡೆಸಿದೆ. ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ ಸೇರ್ಪಡೆಯಿಂದ ಸೌರಾಷ್ಟ್ರ ಬ್ಯಾಟಿಂಗ್ ವಿಭಾಗದ ಬಲ ಹೆಚ್ಚುವ ನಿರೀಕ್ಷೆ ಇದ್ದರೂ, ಅವರು ಅನಾರೋಗ್ಯದಿಂದ ಬಳಲಿದ ಕಾರಣ ಹಿನ್ನಡೆ ಎದುರಿಸಿತು.

ಎಸ್​ಸಿಎ ಸ್ಟೇಡಿಯಂನಲ್ಲಿ ಸೋಮವಾರ ಆರಂಭಗೊಂಡ ಪ್ರಶಸ್ತಿ ಕಾಳಗದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಆತಿಥೇಯ ಸೌರಾಷ್ಟ್ರ ಬ್ಯಾಟಿಂಗ್ ಸ್ನೇಹಿ ಪಿಚ್​ನ ಲಾಭವೆತ್ತಲು ಬಂಗಾಳ ಬೌಲರ್​ಗಳು ಅವಕಾಶ ನೀಡಲಿಲ್ಲ. ಕಳೆದ 8 ವರ್ಷಗಳಲ್ಲಿ 4ನೇ ಬಾರಿ ಫೈನಲ್​ನಲ್ಲಿ ಆಡುತ್ತಿರುವ ಸೌರಾಷ್ಟ್ರ ತಂಡ ಮೊದಲ ದಿನದಂತ್ಯಕ್ಕೆ 80.5 ಓವರ್​ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 206 ರನ್ ಗಳಿಸಿದ್ದು, ಗೌರವಯುತ ಮೊತ್ತಕ್ಕಾಗಿ ಬಾಲಂಗೋಚಿಗಳಿಂದ ದಿಟ್ಟ ಬ್ಯಾಟಿಂಗ್ ನಿರ್ವಹಣೆಯ ನಿರೀಕ್ಷೆಯಲ್ಲಿದೆ.

ಚೇತನ್ ಸಕಾರಿಯಾ (4) ವಿಕೆಟ್ ಉರುಳುವುದರೊಂದಿಗೆ ದಿನದಾಟ ಕೊನೆಗೊಂಡರೆ, ಅರ್ಪಿತ್ ವಸವಾಡ (29) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬಂಗಾಳ ಪರ ವೇಗಿಗಳೇ ಹೆಚ್ಚಿನ ದಾಳಿ ನಡೆಸಿದ್ದರಿಂದ ನಿಧಾನಗತಿ ಓವರ್​ಗೆ ದಿನದಾಟದಲ್ಲಿ 9 ಓವರ್ ನಷ್ಟವಾಯಿತು. ಮಧ್ಯಮ ವೇಗಿ ಆಕಾಶ್ ದೀಪ್ (41ಕ್ಕೆ 3) ಸೌರಾಷ್ಟ್ರವನ್ನು ಅತಿ ಹೆಚ್ಚು ಕಾಡಿದರು.

ಸೌರಾಷ್ಟ್ರ ಉತ್ತಮ ಆರಂಭ: ಆರಂಭಿಕರಾದ ಹಾರ್ವಿಕ್ ದೇಸಾಯಿ (38) ಮತ್ತು ಅವಿ ಬಾರೋಟ್ (54) ಮೊದಲ ವಿಕೆಟ್​ಗೆ 82 ರನ್ ಕೂಡಿ ಹಾಕುವ ಮೂಲಕ ಸೌರಾಷ್ಟ್ರಕ್ಕೆ ಉತ್ತಮ ಆರಂಭ ಒದಗಿಸಿದರು. ಭೋಜನ ವಿರಾಮದ ಬಳಿಕ ಎಡಗೈ ಸ್ಪಿನ್ನರ್ ಶಾಬಾಜ್ ಅಹ್ಮದ್, ಹಾರ್ವಿಕ್ ವಿಕೆಟ್ ಕಬಳಿಸುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ ವಿಶ್ವರಾಜ್ ಜಡೇಜಾ (54) ಮತ್ತು ಅರ್ಪಿತ್ ವಸವಾಡ (29*) 3ನೇ ವಿಕೆಟ್​ಗೆ ಅರ್ಧಶತಕದ ಜತೆಯಾಟವಾಡಿ ಬಂಗಾಳ ಬೌಲರ್​ಗಳಿಗೆ ಸವಾಲಾದರು. ಕೊನೆಯ ಅವಧಿಯ ಆಟದಲ್ಲಿ ಆಕಾಶ್ ದೀಪ್ ಮತ್ತೊಮ್ಮೆ ಸೌರಾಷ್ಟ್ರಕ್ಕೆ ಆಘಾತ ನೀಡಿದರು.

ಪೂಜಾರ ಅಸ್ವಸ್ಥ

ನ್ಯೂಜಿಲೆಂಡ್ ಪ್ರವಾಸದಿಂದ ಬುಧವಾರವಷ್ಟೇ ತವರಿಗೆ ಮರಳಿರುವ ಚೇತೇಶ್ವರ ಪೂಜಾರ, ವಿಮಾನ ಪ್ರಯಾಣದಿಂದ ಬಳಲಿದ್ದು, ಭಾರತೀಯ ಕಾಲಮಾನಕ್ಕೂ ಹೊಂದಿಕೊಳ್ಳಲು ಕಳೆದ ಕೆಲದಿನಗಳಿಂದ ಪರದಾಡಿದ್ದಾರೆ. ಈ ನಡುವೆ ಗಂಟಲು ಸೋಂಕು ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಸೌರಾಷ್ಟ್ರ ಇನಿಂಗ್ಸ್​ನಲ್ಲಿ ಅವರು ಎಂದಿನ ವನ್​ಡೌನ್ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯಲಿಲ್ಲ. ಕೊನೆಗೆ ಆರನೇ ಕ್ರಮಾಂಕದಲ್ಲಿ ಆಡಲಿಳಿದ ಪೂಜಾರ 24 ಎಸೆತ ಎದುರಿಸಿದ ಬಳಿಕ ಅನಾರೋಗ್ಯದಿಂದಾಗಿ ಡ್ರೆಸ್ಸಿಂಗ್ ರೂಮ್ೆ ವಾಪಸಾದರು. 22 ಎಸೆತಗಳನ್ನು ಡಾಟ್ ಬಾಲ್ ಮಾಡಿದ ಪೂಜಾರ 1 ಬೌಂಡರಿ ಸಹಿತ ಕೇವಲ 5 ರನ್ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net