

ಗ್ವಾಲಿಯರ್: ಭಾರತ ಮತ್ತು ಪ್ರವಾಸಿ ಬಾಂಗ್ಲಾದೇಶ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಕಾದಾಟ, ಮಧ್ಯಪ್ರದೇಶದ ಗ್ವಾಲಿಯರ್ನ ಮಾಧವ್ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ಭಾನುವಾರ ನಿಗದಿಯಾಗಿದೆ. ಆದರೆ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯವನ್ನು ವಿರೋಧಿಸಿ, ಅದೇ ದಿನ "ಗ್ವಾಲಿಯರ್ ಬಂದ್' ಮಾಡಲು ಹಿಂದು ಮಹಾಸಭಾ ಕರೆ ನೀಡಿದೆ. ಇದು ಪಂದ್ಯಕ್ಕೆ ಹೆಚ್ಚಿನ ತಾಪತ್ರಯ ಉಂಟು ಮಾಡಿದೆ.
ಗ್ವಾಲಿಯರ್ನಲ್ಲಿ ನಿಗದಿಯಾಗಿರುವ ಪಂದ್ಯವನ್ನು ರದ್ದು ಮಾಡಬೇಕೆಂದು ಹಿಂದು ಮಹಾಸಭಾದ ಉಪಾಧ್ಯಕ್ಷ ಜೈವೀರ್ ಭಾರಾಧ್ವಾಜ್, ಕೇಂದ್ರ ಸರ್ಕಾರ ಮತ್ತು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ಇಲ್ಲದಿದ್ದರೆ ಪಂದ್ಯದ ದಿನ ಇಡೀ ಗ್ವಾಲಿಯರ್ ನಗರವನ್ನು ಬಂದ್ ಮಾಡಿಸುವುದಾಗಿ ಹೇಳಿದ್ದಾರೆ. ಜತೆಗೆ ಪಿಚ್ ಅಗೆಯುವ ಮೂಲಕ ಪಂದ್ಯ ನಡೆಯದಂತೆ ತಡೆಯುವ ಬೆದರಿಕೆಯನ್ನೂ ಒಡ್ಡಿದ್ದಾರೆ.
ಭಾರತ&ಬಾಂಗ್ಲಾ ತಂಡಗಳು ಬುಧವಾರ ಗ್ವಾಲಿಯರ್ ಆಗಮಿಸಿದ ಬೆನ್ನಲ್ಲೇ ಹಿಂದು ಮಹಾಸಭಾ ಪ್ರತಿಭಟನೆ ಆರಂಭಿಸಿದ್ದು, ಕಪು$್ಪ ಮತ್ತು ಕೇಸರಿ ಬಣ್ಣದ ಧ್ವಜವನ್ನು ಹಿಡಿದು ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ 20 ಪ್ರತಿಭಟನಾಕಾರರನ್ನು ಸ್ಥಳಿಯ ಪೊಲೀಸರು ಬಂಧಿಸಿದ್ದಾರೆ.
ಮುಂದಿನ 3 ದಿನ ಪ್ರತಿ ಮನೆ&ಅಂಗಡಿಯ ಬಾಗಿಲಿಗೆ ತೆರಳಿ ಬಂದ್ ಯಶಸ್ವಿಗೊಳಿಸಲು ಪ್ರಯತ್ನಿಸುತ್ತೇವೆ. ಪಂದ್ಯವನ್ನು ಬಹಿಷ್ಕರಿಸುವಂತೆ ಗ್ವಾಲಿಯರ್ ನಿವಾಸಿಗಳಿಗೆ ಮನವಿ ಸಲ್ಲಿಸುತ್ತೇವೆ. ಜಿಹಾದಿಗಳಿಂದ ಹಿಂದುಗಳ ಹತ್ಯೆ ನಡೆದ ದೇಶದ ವಿರುದ್ಧ ಪಂದ್ಯ ಆಡುವುದನ್ನು ನಾವು ಒಪ್ಪಿವುದಿಲ್ಲ ಎಂದು ಜೈವೀರ್ ಭಾರಾಧ್ವಾಜ್ ಹೇಳಿದ್ದಾರೆ.
ತೆಂಡುಲ್ಕರ್ ದ್ವಿಶತಕದ ಬಳಿಕ ಮೊದಲ ಪಂದ್ಯ!
ಗ್ವಾಲಿಯರ್ ಸುಮಾರು 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದಕ್ಕೆ ಆತಿಥ್ಯ ವಹಿಸಿಕೊಳ್ಳುತ್ತಿದೆ. 2010ರಲ್ಲಿ ಭಾರತ&ದಣ ಆಫ್ರಿಕಾ ನಡುವೆ ಇಲ್ಲಿ ಕೊನೆಯದಾಗಿ ಏಕದಿನ ಪಂದ್ಯವೊಂದು ನಡೆದಿತ್ತು. ಅದರಲ್ಲಿ ದಿಗ್ಗಜ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ನ ಮೊಟ್ಟಮೊದಲ ದ್ವಿಶತಕವೀರ ಎನಿಸಿದ್ದರು.