BJP ಸೇರಿದರೆ ನನ್ನ ಮೇಲಿನ ಅಮಾನತು ತೆರವು; ನಿಷೇಧದ ಬೆನ್ನಲ್ಲೇ ಅಚ್ಚರಿಯ ಹೇಳಿಕೆ ನೀಡಿದ Bajrang Punia

Bajrang Punia
Published on

ನವದೆಹಲಿ: ನಾನು ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವುಗೊಳಿಸಲಿದೆ ಎಂದು ಹೇಳುವ ಮೂಲಕ ಕುಸ್ತಿಪಟು ಬಜರಂಗ್​ ಪೂನಿಯಾ (Bajrang Punia) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಡೋಪ್​ ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದ ಕಾರಣ ನಾಲ್ಕು ವರ್ಷಗಳ ಕಾಲಕುಸ್ತಿಪಟು ಬಜರಂಗ್​ ಪೂನಿಯಾರನ್ನು ನಾಲ್ಕು ವರ್ಷಗಳ ಅಮಾನತು ಮಾಡಲಾಗಿದ್ದು, ಇದರ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.

ಈ ಬಗ್ಗೆ ಮಾತನಾಡಿರುವ ಬಜರಂಗ್ (Bajrang Punia), ನನಗೆ ಆಘಾತವಾಗಿಲ್ಲ. ಕಳೆದೊಂದು ವರ್ಷದಿಂದ ವಿವಾದದ ಕುರಿತು ಚರ್ಚೆ ನಡೆಯುತ್ತಿದೆ. ನಾಡಾಗೆ ಮಾದರಿ ನೀಡಲು ನಾನು ನಿರಾಕರಿಸಿಲ್ಲ ಎಂದು ಹಿಂದೆಯೂ ಸ್ಪಷ್ಟಪಡಿಸಿದ್ದೇನೆ. ಡೋಪ್​ ಪರೀಕ್ಷೆ ನಡೆಸಲು ಅವಧಿ ಮುಗಿದ ಕಿಟ್‌ನೊಂದಿಗೆ (2023, ಡಿಸೆಂಬರ್) ನನ್ನ ಮನೆಗೆ ಭೇಟಿ ನೀಡಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲೂ ನಾನು ಪೋಸ್ಟ್ ಹಂಚಿಕೊಂಡಿದ್ದೇನೆ.

ನಿಯಮಗಳ ಪ್ರಕಾರ ಅವಧಿ ಮುಗಿದ ಕಿಟ್​ಅನ್ನು ಆಟಗಾರನಿಗೆ ನೀಡುವಂತಿಲ್ಲ. ಈ ವಿಚಾರ ನನ್ನ ತಂಡದ ಗಮನಕ್ಕೂ ಬಂದಿದೆ. 2020, 2021, 2022ರಲ್ಲಿ ಅವಧಿ ಮುಗಿದ ಕಿಟ್ ನೀಡಲಾಗಿತ್ತು. ನಾನು ಪರೀಕ್ಷೆಗೆ ಮಾದರಿಯನ್ನು ನೀಡಿದ್ದೇನೆ. ಆದರೆ ನನ್ನ ತಂಡವು ಕಿಟ್ ಪರಿಶೀಲಿಸಿದಾಗ ವಾಯಿದೆ ಮುಗಿದಿದೆ ಎಂದು ವಿಚಾರ ತಿಳಿದು ಬಂದಿದೆ. ಆದ್ದರಿಂದ ಕಿಟ್‌ನ ವಿಡಿಯೋ ಮಾಡಿ ನಾವು ನಾವು ನಾಡಾಗೆ ಮೇಲ್​ ಮಾಡಿದ್ದೆವು. ಆದರೆ ತಪ್ಪು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ.

ಕಳೆದ ವರ್ಷ ಮಹಿಳಾ ಕುಸ್ತಿಪಟುಗಳಿಗೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಸರ್ಕಾರ ತನ್ನ ಏಜೆನ್ಸಿಗಳ ಮೂಲಕ ನನ್ನ ವಿರುದ್ಧ ಈ ರೀತಿ ಸೇಡು ತೀರಿಕೊಳ್ಳುತ್ತಿದೆ. ನಾನು ಕಳೆದ 10-12 ವರ್ಷಗಳಿಂದ ನಾನು ಕುಸ್ತಿ ಅಖಾಡದಲ್ಲಿದ್ದೇನೆ. ಎಲ್ಲ ಪಂದ್ಯಾವಳಿಗೂ ಮುನ್ನ ಮಾದರಿ ನೀಡುತ್ತಿದ್ದೇನೆ. ಆದರೆ ನಮ್ಮನ್ನು ಒಡೆದು, ಅವರಿಗೆ ತಲೆಬಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಒಂದು ವೇಳೆ ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವುಗೊಳಿಸಬಹುದು ಎಂದು ಕುಸ್ತಿಪಟು ಭಜರಂಗ್​ ಪೂನಿಯಾ (Bajrang Punia) ಹೇಳಿದ್ದಾರೆ.

2024ರ ಮಾರ್ಚ್ 10ರಂದು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಟ್ರಯಲ್ಸ್‌ನಲ್ಲಿ ಮಾದರಿ ನೀಡಲು ನಿರಾಕರಿಸುವ ಮೂಲಕ ಬಜರಂಗ್ (Bajrang Punia) ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (NADA) ಆರೋಪಿಸಿದೆ. ಆರೋಪ ಕೇಳಿ ಬಂದ ಬೆನ್ನಲ್ಲೇ ಬಜರಂಗ್​ರನ್ನು ಏಪ್ರಿಲ್​ 23ರಂದು ಅಮಾನತು ಮಾಡಲಾಗಿತ್ತು. ಇದರ ಬೆನ್ನಲ್ಲೇ ವಿಶ್ವ ಕುಸ್ತಿ ಒಕ್ಕೂಟವೂ (UWW) ಬಜರಂಗ್​ರನ್ನು ನಾಲ್ಕು ವರ್ಷಗಳ ಕಾಲ ಅಮಾನತು ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net