ಚೆಂಡು ವಿರೂಪ ಕಾನೂನುಬದ್ಧ? ಐಸಿಸಿ ಚಿಂತನೆ, ಕರೊನಾದಿಂದಾಗಿ ಎಂಜಲು ಬಳಕೆ ನಿಷಿದ್ಧ

page 10 4
Published on

ನವದೆಹಲಿ: ಕ್ರಿಕೆಟ್ ನಿಯಮಗಳ ಪ್ರಕಾರ ಕೃತಕ ವಸ್ತುಗಳಿಂದ ಚೆಂಡನ್ನು ಪಾಲಿಶ್ ಮಾಡಿದರೆ ಅದನ್ನು ‘ಚೆಂಡು ವಿರೂಪ’ ಎನ್ನಲಾಗುತ್ತದೆ. ಇದು ಅಪರಾಧ ಮತ್ತು ಇದಕ್ಕೆ ತಕ್ಕ ಶಿಕ್ಷೆಯೂ ಇದೆ. ಆದರೆ ಕರೊನಾ ನಿಗ್ರಹಗೊಂಡ ಬಳಿಕ ಕ್ರಿಕೆಟ್ ಪಂದ್ಯಗಳು ಪುನರಾರಂಭಗೊಂಡಾಗ ಕೃತಕ ವಸ್ತುಗಳಿಂದ ಚೆಂಡು ವಿರೂಪಗೊಳಿಸುವುದು ಕಾನೂನುಬದ್ಧವಾದರೆ ಅಚ್ಚರಿ ಇಲ್ಲ. ಯಾಕೆಂದರೆ ಇಂಥದ್ದೊಂದು ಚಿಂತನೆ ಐಸಿಸಿ ವಲಯದಲ್ಲಿ ಶುರುವಾಗಿದೆ.

ಸಾಮಾನ್ಯವಾಗಿ ಕ್ರಿಕೆಟಿಗರು ಚೆಂಡಿಗೆ ಎಂಜಲು (ಸಲೈವಾ) ಹಚ್ಚಿ ಉಜ್ಜುವ ಮೂಲಕ ಹೊಳಪು ತರುತ್ತಾರೆ. ಇದು ವೇಗಿಗಳಿಗೆ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ನೆರವಾಗುತ್ತದೆ. ಆದರೆ ಕರೊನಾ ಭೀತಿಯಿಂದಾಗಿ ಇನ್ನು ಮುಂದೆ ಎಲ್ಲ ಕ್ರಿಕೆಟಿಗರೂ ಚೆಂಡಿಗೆ ಉಗುಳು ಹಚ್ಚಲು ಹಿಂದೇಟು ಹಾಕುತ್ತಾರೆ. ಇದರಿಂದ ಬ್ಯಾಟ್ಸ್​ಮನ್​ಗಳು ಮೇಲುಗೈ ಸಾಧಿಸಿ ಕ್ರಿಕೆಟ್ ಪಂದ್ಯದಲ್ಲಿ ಸ್ಪರ್ಧಾತ್ಮಕ ಕಡಿಮೆಯಾಗುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಚೆಂಡಿಗೆ ಹೊಳಪು ತರಲು ಕೃತಕ ವಸ್ತುಗಳ ಬಳಕೆಗೆ ಅವಕಾಶ ನೀಡುವ ಬಗ್ಗೆ ಐಸಿಸಿ ಅಧಿಕಾರಿಗಳು ಮುಕ್ತ ಮನಸ್ಸು ಮಾಡಿದ್ದಾರೆ. ಅಂಪೈರ್​ಗಳ ಮೇಲ್ವಿಚಾರಣೆಯಲ್ಲೇ ಚೆಂಡಿಗೆ ಹೊಳಪು ನೀಡುವ ಈ ಕೆಲಸವನ್ನು ಆಟಗಾರರಿಂದ ಮಾಡಿಸುವ ಸಾಧ್ಯತೆ ಇದೆ.

ಕರೊನಾ ಸೋಂಕಿನ ಭೀತಿಯಿಂದ ಮುಂದಿನ ದಿನ ಗಳಲ್ಲಿ ಚೆಂಡಿಗೆ ಎಂಜಲು ಹಚ್ಚಲು ಅವಕಾಶ ನೀಡುವುದು ಸುರಕ್ಷಿತವಲ್ಲ ಎಂದು ಐಸಿಸಿಯ ವೈದ್ಯಕೀಯ ಸಮಿತಿ ಅಭಿಪ್ರಾಯಪಟ್ಟಿದೆ. ಪೀಟರ್ ಹರ್​ಕೋರ್ಟ್ ಸಾರಥ್ಯದ ಐಸಿಸಿ ವೈದ್ಯಕೀಯ ಸಮಿತಿ, ಗುರುವಾರ ನಡೆದ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ವೇಳೆ ಕ್ರಿಕೆಟ್ ಪುನರಾರಂಭಕ್ಕೆ ಅನುಸರಿಸಬೇಕಾದ ವಿವಿಧ ರೂಪುರೇಷೆಗಳನ್ನು ವಿವರಿಸಿದೆ. ಹಾಲಿ ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕ್ರಿಕೆಟ್ ಪುನರಾರಂಭ ಎಣಿಸಿದಷ್ಟು ಸರಾಗವಲ್ಲ ಎಂದು ಹರ್​ಕೋರ್ಟ್ ತಿಳಿಸಿದ್ದಾರೆ.

ಚೆಂಡು ವಿರೂಪಕ್ಕೆ ಇದೆ ಕಠಿಣ ಶಿಕ್ಷೆ: 2018ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್​ಟೌನ್ ಟೆಸ್ಟ್ ವೇಳೆ ಆಸೀಸ್ ಕ್ರಿಕೆಟಿಗರಿಂದ ನಡೆದ ಚೆಂಡು ವಿರೂಪ ಪ್ರಕರಣ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಅಲ್ಲೋಲಕಲ್ಲೋಲ ವನ್ನೇ ಸೃಷ್ಟಿಸಿತ್ತು. ಆಸ್ಟ್ರೇಲಿಯಾದ ಆಗಿನ ನಾಯಕ ಸ್ಟೀವನ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ‘ಸ್ಯಾಂಡ್​ಪೇಪರ್’ ಬಳಸುವ ಮೂಲಕ ಚೆಂಡನ್ನು ಶೈನ್ ಮಾಡಲು ಪಿತೂರಿ ಮಾಡಿದ್ದರು. ಇದಕ್ಕಾಗಿ ಅವರು ತಂಡದ ಯುವ ಆಟಗಾರ ಬ್ಯಾನ್​ಕ್ರಾಫ್ಟ್​ರನ್ನು ಬಳಸಿಕೊಂಡಿದ್ದರು. ಸಿಕ್ಕಿಬಿದ್ದ ಬಳಿಕ ಈ ಮೂವರಿಗೂ ಕ್ರಿಕೆಟ್ ಆಸ್ಟ್ರೇಲಿಯಾದಿಂದ ನಿಷೇಧ ಶಿಕ್ಷೆಯಾಗಿತ್ತು. ತಂಡದ ಕೋಚ್ ಡರೇನ್ ಲೆಹ್ಮನ್ ಪದತ್ಯಾಗ ಮಾಡಿದ್ದರು.

ಟೆಸ್ಟ್ ಕ್ರಿಕೆಟ್​ನಲ್ಲಿ ಪಾಲಿಶ್ ಮಾಡುವುದು ಅಗತ್ಯ: ಟೆಸ್ಟ್ ಕ್ರಿಕೆಟ್​ನಲ್ಲಿ ಚೆಂಡನ್ನು ಎಂಜಲು ಅಥವಾ ಬೆವರು ಹಚ್ಚುವ ಮೂಲಕ ಪಾಲಿಶ್ ಮಾಡುವುದು ಅವಿಭಾಜ್ಯ ಅಂಗವಾಗಿದೆ. ಇದು ಕಾನೂನುಬದ್ಧವೂ ಆಗಿದೆ. ಚೆಂಡಿನ ಒಂದು ಬದಿಯ ಪದರವನ್ನು ಶೈನ್ ಮಾಡುವುದರಿಂದ ಸ್ವಿಂಗ್ ಮಾಡಲು ಬೌಲರ್​ಗಳಿಗೆ ನೆರವಾಗುತ್ತದೆ. ಕೆಲವೊಮ್ಮೆ ಚೆಂಡನ್ನು ಶೈನ್ ಮಾಡಲು ಆಟಗಾರರು ಕೃತಕ ವಸ್ತುಗಳನ್ನೂ ಬಳಸುತ್ತಾರೆ. ಇದು ‘ಅಡ್ಡದಾರಿ’ಯಾಗಿದ್ದು, ಚೆಂಡು ವಿರೂಪ ಎಂದೇ ಪರಿಗಣಿಸಲ್ಪಡುತ್ತದೆ. ಚೆಂಡಿಗೆ ಪಾಲಿಶ್ ಮಾಡಲು ಸಾಧ್ಯವಾಗದಿದ್ದರೆ ಬೌಲರ್​ಗಳಿಗೆ ಟೆಸ್ಟ್ ಕ್ರಿಕೆಟ್ ಕಠಿಣವಾಗುತ್ತದೆ ಎಂದು ಆಸೀಸ್ ವೇಗಿ ಜೋಸ್ ಹ್ಯಾಸಲ್​ವುಡ್ ಅಭಿಪ್ರಾಯಪಟ್ಟಿದ್ದಾರೆ. ಸೀಮಿತ ಓವರ್ ಕ್ರಿಕೆಟ್​ನಲ್ಲಿ ಬಳಸುವ ಬಿಳಿ ಚೆಂಡಿಗೆ ಪಾಲಿಶ್ ಮಾಡದಿದ್ದರೂ ನಡೆಯುತ್ತದೆ. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಬಳಸುವ ಕೆಂಪು ಚೆಂಡು ಪಾಲಿಶ್ ಮಾಡಿದರಷ್ಟೇ ಸ್ವಿಂಗ್ ಆಗುತ್ತದೆ. ಬೌಲರ್​ಗಳು ಹೆಚ್ಚಾಗಿ ಅದನ್ನೇ ನೆಚ್ಚಿಕೊಂಡಿರುತ್ತಾರೆ. ಹೊಸ ಚೆಂಡಿನ ಶೈನಿಂಗ್ ಹೋಗಿಬಿಟ್ಟರೆ ಬಳಿಕ ಬೌಲರ್​ಗಳು ಪರದಾಡಬೇಕಾಗುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net