ವಿಶ್ವ ಬ್ಯಾಡ್ಮಿಂಟನ್: ಪ್ರಿ ಕ್ವಾರ್ಟರ್​ಫೈನಲ್​ಗೇರಿದ ಸಿಂಧು, ಆಯುಷ್​; ಲಕ್ಷ್ಯ, ಉನ್ನತಿ ಹೊರಕ್ಕೆ!

ವಿಶ್ವ ಬ್ಯಾಡ್ಮಿಂಟನ್: ಪ್ರಿ ಕ್ವಾರ್ಟರ್​ಫೈನಲ್​ಗೇರಿದ ಸಿಂಧು, ಆಯುಷ್​; ಲಕ್ಷ್ಯ, ಉನ್ನತಿ ಹೊರಕ್ಕೆ!
ವಿಶ್ವ ಬ್ಯಾಡ್ಮಿಂಟನ್: ಪ್ರಿ ಕ್ವಾರ್ಟರ್​ಫೈನಲ್​ಗೇರಿದ ಸಿಂಧು, ಆಯುಷ್​; ಲಕ್ಷ್ಯ, ಉನ್ನತಿ ಹೊರಕ್ಕೆ!
Published on

ನವದೆಹಲಿ: ಆತಿಥೇಯ ಭಾರತದ ತಾರೆಯರಾದ ಪಿವಿ ಸಿಂಧು ಮತ್ತು ಕನ್ನಡಿಗ ಆಯುಷ್​ ಶೆಟ್ಟಿ ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ನಲ್ಲಿ (

BWF World Championships

) ಪ್ರಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದ್ದಾರೆ. ಲಕ್ಷ್ಯ ಸೇನ್​ ಮತ್ತು ಉನ್ನತಿ ಹೂಡಾ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿ ಹೊರಬಿದ್ದರು.

ಆರನೇ ವಿಶ್ವ ಚಾಂಪಿಯನ್​ಷಿಪ್​ ಪದಕದ ನಿರೀಕ್ಷೆಯಲ್ಲಿರುವ ಅನುಭವಿ ಷಟ್ಲರ್​ ಪಿವಿ ಸಿಂಧು, ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ 32ರ ಘಟ್ಟದ ಪಂದ್ಯದಲ್ಲಿ ಕೆನಡಾದ ವೆನ್​ ಯು ಜಾಂಗ್​ ವಿರುದ್ಧ 21-16, 21-17 ನೇರಗೇಮ್​ಗಳಿಂದ 35 ನಿಮಿಷಗಳಲ್ಲೇ ಗೆಲುವು ದಾಖಲಿಸಿದರು. 31 ವರ್ಷದ ಪಿವಿ ಸಿಂಧುಗೆ 16ರ ಘಟ್ಟದಲ್ಲಿ 3ನೇ ಶ್ರೇಯಾಂಕಿತೆ ಚೀನಾದ ವಾಂಗ್​ ಜಿ ಯೀ ಸವಾಲು ಎದುರಾಗಲಿದೆ.

ಮೊದಲ ಸುತ್ತಿನಲ್ಲಿ ವಿಶ್ವ ನಂ. 1 ಯು ಶಿ ಖಿಗೆ ಆಘಾತಕಾರಿ ಸೋಲುಣಿಸಿ ಗಮನಸೆಳೆದಿದ್ದ 21 ವರ್ಷದ ಆಯುಷ್​ ಶೆಟ್ಟಿ 2ನೇ ಸುತ್ತಿನಲ್ಲಿ ಶ್ರೀಲಂಕಾದ ದುಮಿಂದು ಅಬೆಯವಿಕ್ರಮ ವಿರುದ್ಧ 21-8, 21-10 ನೇರಗೇಮ್​ಗಳಿಂದ ಸುಲಭ ಗೆಲುವು ದಾಖಲಿಸಿದರು. 26 ನಿಮಿಷಗಳಲ್ಲೇ ಗೆದ್ದ ಆಯುಷ್​, 16ರ ಘಟ್ಟದಲ್ಲಿ 11ನೇ ಶ್ರೇಯಾಂಕಿತ ಇಂಡೋನೇಷ್ಯಾದ ಅಲ್ವಿ ರ್ಹಾನ್​ ಸವಾಲು ಎದುರಿಸಲಿದ್ದಾರೆ.
ಲಕ್ಷ್ಯ ಸೇನ್​ಗೆ ಶಾಕ್​
14ನೇ ಶ್ರೇಯಾಂಕಿತ ಲಕ್ಷ್ಯ ಸೇನ್​ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಗರೆಟ್​ ಟಾನ್​ ವಿರುದ್ಧ 21-19, 19-21, 17-21ರಿಂದ 73 ನಿಮಿಷಗಳ ಹೋರಾಟದಲ್ಲಿ ಪರಾಭವಗೊಂಡರು. ಲಕ್ಷ್ಯ ಸೇನ್​ ಮೊದಲ ಗೇಮ್​ ಗೆದ್ದು ಉತ್ತಮ ಆರಂಭವನ್ನೇ ಕಂಡರೂ, ನಂತರದಲ್ಲಿ ಲಯ ತಪ್ಪಿದರು. ಯುವ ಆಟಗಾರ್ತಿ ಉನ್ನತಿ ಹೂಡಾ ಮಹಿಳಾ ಸಿಂಗಲ್ಸ್​ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಕೆನಡಾದ ಮಿಚೆಲ್​ ಲೀ ವಿರುದ್ಧ 21-11, 9-21, 21-23ರಿಂದ ವೀರೋಚಿತ ಸೋಲು ಅನುಭವಿಸಿದರು.
ಕಪಿಲ-ತನಿಷಾ ಮುನ್ನಡೆ
ಮಿಶ್ರ ಡಬಲ್ಸ್​ ವಿಭಾಗದಲ್ಲಿ ತನಿಷಾ ಕ್ರಾಸ್ಟೋ ಮತ್ತು ಧ್ರುವ ಕಪಿಲ ಜೋಡಿ ಪ್ರಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ತನಿಷಾ-ಕಪಿಲ ಜೋಡಿ 2ನೇ ಸುತ್ತಿನ ಪಂದ್ಯದಲ್ಲಿ ಮಕಾವ್​ನ ಲಿಯೋಂಗ್​ ಲೋಕ್​ ಚೊಂಗ್​ ಮತ್ತು ಎನ್​ಜಿ ವೆಂಗ್​ ಜೋಡಿಯನ್ನು 21-11, 21-11 ನೇರಗೇಮ್​ಗಳಿಂದ ಮಣಿಸಿತು.

ಸಾತ್ವಿಕ್​-ಚಿರಾಗ್​ ಜೋಡಿ!

ಮಾಜಿ ವಿಶ್ವ ನಂ. 1 ಸಾತ್ವಿಕ್​ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಜೋಡಿ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಇದುವರೆಗೆ ಒಂದೂ ಪಂದ್ಯ ಆಡದೆಯೂ 16ರ ಘಟ್ಟಕ್ಕೇರಿದೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ 5ನೇ ಶ್ರೇಯಾಂಕಿತ ಸಾತ್ವಿಕ್​-ಚಿರಾಗ್​ ಜೋಡಿಗೆ ಬುಧವಾರ ನಡೆಯಬೇಕಿದ್ದ 2ನೇ ಸುತ್ತಿನ ಪಂದ್ಯಕ್ಕೆ ಮುನ್ನ ಎದುರಾಳಿ ಜೋಡಿ ಗಾಯದ ಸಮಸ್ಯೆಯಿಂದಾಗಿ ವಾಕ್​ಓವರ್​ ನೀಡಿತು. ಪುರುಷರ ಡಬಲ್ಸ್​ ವಿಭಾಗದಲ್ಲಿ ಭಾರತದ ಮತ್ತೊಂದು ಜೋಡಿಯಾದ ಹರಿಹರನ್​ ಮತ್ತು ಎಂ. ಆರ್​. ಅರ್ಜುನ್​ ಎರಡನೇ ಸುತ್ತಿನಲ್ಲಿ ಹೊರಬಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net