

ನವದೆಹಲಿ: ಆಗಸ್ಟ್ 17ರಿಂದ ಭಾರತದ ಆತಿಥ್ಯದಲ್ಲೇ ನಡೆಯಲಿರುವ ಟೂರ್ನಿಯೊಂದಿಗೆ ಕನ್ನಡಿಗ ಆಯುಷ್ ಶೆಟ್ಟಿ (
Ayush Shetty
) ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಗೆ (
BWF World Championship
) ತವರಿನಲ್ಲೇ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದಾರೆ. ಆದರೆ ಅವರು ಮೊದಲ ಸುತ್ತಿನಲ್ಲೇ ವಿಶ್ವ ನಂ. 1 ಚೀನಾದ ಆಟಗಾರ ಶಿ ಯುಖಿ ಅವರ ಕಠಿಣ ಸವಾಲು ಎದುರಿಸಲಿದ್ದಾರೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ 21 ವರ್ಷದ ಆಯುಷ್, ಇದನ್ನು ಇನ್ನೊಂದು ಪಂದ್ಯವಷ್ಟೇ ಎಂದು ಪರಿಗಣಿಸಿರುವುದಾಗಿ ತಿಳಿಸಿದರು.
"ನಾನು ಡ್ರಾದ ನೇರಪ್ರಸಾರವನ್ನು ವೀಸುತ್ತಿದ್ದೆ. ನನ್ನ ಮೊದಲ ಎದುರಾಳಿ ಶಿ ಯುಖಿ ಎಂದು ಗೊತ್ತಾದ ಕೂಡಲೆ ಅವರನ್ನು ಎದುರಿಸಲು ಸಜ್ಜಾಗಲು ಆರಂಭಿಸಿದೆ' ಎಂದು ಆಯುಷ್ ಶೆಟ್ಟಿ ಸೋಮವಾರ ಮಾಧ್ಯಮದೊಂದಿಗೆ ಆನ್ಲೈನ್ ಸಂವಾದದಲ್ಲಿ ಹೇಳಿದರು. ಅವರು ಒಲಿಂಪಿಕ್ಸ್ ಅವಳಿ ಪದಕ ವಿಜೇತೆ ಪಿವಿ ಸಿಂಧು ಅವರೊಂದಿಗೆ ಅಭ್ಯಾಸ ನಡೆಸುತ್ತ ಟೂರ್ನಿಗೆ ಸಜ್ಜಾಗುತ್ತಿದ್ದಾರೆ.
"ಸಿಂಧು ಅವರಿಂದ ನಾನು ಸಾಕಷ್ಟು ಕಲಿಯುತ್ತಿದ್ದೇನೆ. ನಮ್ಮಿಬ್ಬರ ಆಟದ ಶೈಲಿ ಬಹುತೇಕ ಒಂದೇ ರೀತಿಯಾಗಿದೆ. ನಾವಿಬ್ಬರೂ ಹೆಚ್ಚು ಆಕ್ರಮಣಕಾರಿಯಾಗಿ ಆಡಲು ಪ್ರಯತ್ನಿಸುತ್ತಿದ್ದೇವೆ' ಎಂದು ಕಾರ್ಕಳದ ಆಯುಷ್ ತಿಳಿಸಿದರು.
ಭಾರತದಲ್ಲಿ 17 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ಷಿಪ್ ನಡೆಯುತ್ತಿದೆ. ಇದು ಇನ್ನಷ್ಟು ಹೆಚ್ಚಿನ ಜನರನ್ನು ಬ್ಯಾಡ್ಮಿಂಟನ್ ಆಟದತ್ತ ಸೆಳೆಯಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2009ರಲ್ಲಿ ಭಾರತದಲ್ಲಿ ಮೊದಲ ವಿಶ್ವ ಚಾಂಪಿಯನ್ಷಿಪ್ ನಡೆದಾಗ ನನಗೆ ಕೇವಲ 4 ವರ್ಷ. ಆ ಬಗ್ಗೆ ನನಗೆ ಗೊತ್ತಿರಲಿಲ್ಲ. ಯಾಕೆಂದರೆ ನಾನು ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದು 8ನೇ ವಯಸ್ಸಿನಲ್ಲಿ. ನನ್ನ ತಂದೆ ಬ್ಯಾಡ್ಮಿಂಟನ್ ಆಟವಾಡುವುದನ್ನು ನೋಡಿ ಕಲಿತೆ ಎಂದು ಹೇಳಿದರು.