ಆತಿಥೇಯ ಜಪಾನ್​ ಸಾಂಸ್ಕೃತಿಕ ವೈಭವದೊಂದಿಗೆ ಏಷ್ಯನ್​ ಗೇಮ್ಸ್​​ ವರ್ಣರಂಜಿತ ಆರಂಭ

ಆತಿಥೇಯ ಜಪಾನ್​ ಸಾಂಸ್ಕೃತಿಕ ವೈಭವದೊಂದಿಗೆ ಏಷ್ಯನ್​ ಗೇಮ್ಸ್​​ ವರ್ಣರಂಜಿತ ಆರಂಭ
ಆತಿಥೇಯ ಜಪಾನ್​ ಸಾಂಸ್ಕೃತಿಕ ವೈಭವದೊಂದಿಗೆ ಏಷ್ಯನ್​ ಗೇಮ್ಸ್​​ ವರ್ಣರಂಜಿತ ಆರಂಭ
Published on
ಐಚಿ-ನಗೋಯಾ: ಕಳೆದ ಕೆಲ ದಿನಗಳಿಂದ ಕ್ರೀಡಾಪಟುಗಳ ವಸತಿಯ ಗೊಂದಲದಿಂದಾಗಿ ಭಾರಿ ಅವ್ಯವಸ್ಥೆಯಿಂದ ಸುದ್ದಿಯಾಗಿದ್ದ ಏಷ್ಯನ್​ ಗೇಮ್ಸ್​ 20ನೇ ಆವೃತ್ತಿಗೆ (Asian Games opening ceremony) ಶನಿವಾರ ಆತಿಥೇಯ ಜಪಾನ್​ನ ಸಾಂಸ್ಕೃತಿಕ ವೈಭವದ ಜತೆಗೆ ತಂತ್ರಜ್ಞಾನ ಮತ್ತು ಕೈಗಾರಿಕಾ ಶಕ್ತಿಯ ಪ್ರದರ್ಶನದೊಂದಿಗೆ ಶಿಸ್ತುಬದ್ಧ ವರ್ಣರಂಜಿತ ಚಾಲನೆ ನೀಡಲಾಯಿತು. ಇನ್ನು 15 ದಿನಗಳ ಕಾಲ 45 ದೇಶಗಳ ಸುಮಾರು 11 ಸಾವಿರ ಕ್ರೀಡಾಪಟುಗಳು 43 ಕ್ರೀಡೆಗಳಲ್ಲಿ ಒಟ್ಟಾರೆ 469 ಚಿನ್ನದ ಪದಕಕ್ಕಾಗಿ ಹೋರಾಡಲಿದ್ದಾರೆ.
"ಲಯಬದ್ಧ ಹೃದಯಬಡಿತ' ಎಂಬ ಪರಿಕಲ್ಪನೆಯೊಂದಿಗೆ ಜಪಾನ್​ ತನ್ನ ಆತಿಥ್ಯದ 3ನೇ ಏಷ್ಯನ್​ ಕ್ರೀಡಾಕೂಟದ ಆರಂಭೋತ್ಸವವನ್ನು ಹೆಚ್ಚು ಶ್ರೀಮಂತಿ ಇಲ್ಲದೆ ಸರಳವಾಗಿ ಆಯೋಜಿಸಿತು. ಹೃದಯ ಆಕಾರದ ವೇದಿಕೆ ಸಮಾರಂಭದ ಕೇಂದ್ರಬಿಂದುವಾಗಿತ್ತು. "ಹೃದಯದಿಂದ ಹೃದಯಕ್ಕೆ ಬೆಸೆದುಕೊಳ್ಳುವುದನ್ನು ಸಂಕೇತಿಸುವ "ಒಂದು ಏಷ್ಯಾ' ಎಂಬ ಪರಿಕಲ್ಪನೆಯ ದೃಶ್ಯರೂಪವನ್ನು ಪ್ರತಿಬಿಂಬಿಸಲು ಇದನ್ನು ಆಯ್ಕೆ ಮಾಡಲಾಗಿತ್ತು. ವೇದಿಕೆ ಮೇಲೆ ನಡೆದ ಕಲಾವಿದರ ಅದ್ಭುತ ಪ್ರದರ್ಶನದಲ್ಲಿ ಸ್ಥಳಿಯ ಐಚಿ ಕೈಗಾರಿಕಾ ತಂತ್ರಜ್ಞಾನ ಮತ್ತು ಶಾಸ್ತ್ರೀಯ ಕಲೆಗಳು ಸುಂದರವಾಗಿ ಮೇಲೈಸಿದವು. ಇದರಲ್ಲಿ ಸಾಂಪ್ರದಾಯಿಕ ಜಪಾನೀಸ್​ ಕಬುಕಿ ರಂಗಮಂಚ ಮತ್ತು ಧ್ವಜವನ್ನು ಬೀಸುತ್ತಿದ್ದ ಬೃಹತ್​ ಕೈಗಾರಿಕಾ ರೋಬಾಟ್​ ತೋಳಿನ ಪ್ರದರ್ಶನವೂ ಸೇರಿತ್ತು. 30 ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿದ್ದ ಮಿಜುಹೋ ಪಾರ್ಕ್​ ಅಥ್ಲೆಟಿಕ್ಸ್​ ಸ್ಟೇಡಿಯಂ ಪ್ರೇಕ್ಷಕರಿಂದ ಸಂಪೂರ್ಣವಾಗಿ ತುಂಬಿತ್ತು.
ಆರಂಭ ಘೋಷಿಸಿದ ನರುಹಿಟೋ
ಎರಡು ಗಂಟೆ ಕಾಲ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜಪಾನ್​ ಚಕ್ರವರ್ತಿ ನರುಹಿಟೋ ಕ್ರೀಡಾಕೂಟದ ಅಧಿಕೃತ ಆರಂಭವನ್ನು ಘೋಷಿಸಿದರು. ಜಪಾನ್​ ಸಾಮ್ರಾಜ್ಞಿ ಮಸಾಕೊ, ಏಷ್ಯನ್​ ಒಲಿಂಪಿಕ್​ ಕೌನ್ಸಿಲ್​ ಅಧ್ಯಕ್ಷ ಶೇಖ್​ ಜೋವಾನ್​ ಬಿನ್​ ಹಮದ್​ ಅಲ್​ ಥಾನಿ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಯ ಮುಖ್ಯಸ್ಥೆ ಕರ್ಸ್ಟಿ ಕೊವೆಂಟ್ರಿ ಹಾಜರಿದ್ದರು. 46 ತಂಡಗಳ ಪರೇಡ್​ನಲ್ಲಿ ಅಫ್ಘಾನಿಸ್ತಾನ ಮೊದಲಿಗೆ ಮತ್ತು 900ಕ್ಕೂ ಅಧಿಕ ಕ್ರೀಡಾಪಟುಗಳನ್ನು ಒಳಗೊಂಡ ಆತಿಥೇಯ ಜಪಾನ್​ ತಂಡ ಕೊನೆಯದಾಗಿ ಕ್ರೀಡಾಂಗಣ ಪ್ರವೇಶಿಸಿತು.
ಭಾರತಕ್ಕೆ ಮನು, ಪವನ್​ ಸಾರಥ್ಯ
ಉದ್ಘಾಟನಾ ಸಮಾರಂಭದಲ್ಲಿ ನಡೆದ ಕ್ರೀಡಾಪಟುಗಳ ಪಥ ಸಂಚಲನದಲ್ಲಿ ಶೂಟರ್​ ಮನು ಭಾಕರ್​ ಮತ್ತು ಕಬಡ್ಡಿ ತಾರೆ ಪವನ್​ ಸೆಹ್ರಾವತ್​ ತ್ರಿವರ್ಣ ಧ್ವಜದೊಂದಿಗೆ ಮುನ್ನಡೆದರು. ಭಾರತದ ಮಹಿಳಾ ಕ್ರೀಡಾಪಟುಗಳು ನೇವಿ ಬ್ಲೂ ಬಣ್ಣದ ಸೀರೆಯೊಂದಿಗೆ ಬಂದ್ಗಾಲಾ ಶೈಲಿಯ ಜಾಕೆಟ್​ ಧರಿಸಿ ಕಂಗೊಳಿಸಿದರು. ಪುರುಷರ ಕ್ರೀಡಾಪಟುಗಳು ನೇವಿ ಬ್ಲೂ ಬಣ್ಣದ ಬಂದ್ಗಾಲಾ ಶೈಲಿಯ ಜಾಕೆಟ್​-ಟ್ರೌಸರ್​ ಧರಿಸಿದ್ದರು. ಪುರುಷರ ಪ್ರತಿನಿಧಿಯಾಗಿ ತ್ರಿವರ್ಣ ಹಿಡಿಯಬೇಕಾಗಿದ್ದ ಶಾಟ್​ಪುಟ್​ ತಾರೆ ತೇಜಿಂದರ್​ಪಾಲ್​ ಸಿಂಗ್​ ಟೂರ್​ ಅವರ ಉದ್ಘಾಟನಾ ಸಮಾರಂಭದ ಕಿಟ್​ ಸಕಾಲದಲ್ಲಿ ಸಿಗದ ಕಾರಣ ಬದಲಿಗರಾಗಿ ಪವನ್​ ಪಾಲ್ಗೊಂಡರು.
*ಐಚಿ-ನಗೋಯಾದ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸುತ್ತಿರುವ ಭಾರತ ತಂಡಕ್ಕೆ ನನ್ನ ಶುಭಾಶಯಗಳು. ಪ್ರತಿಯೊಬ್ಬ ಕ್ರೀಡಾಪಟು ಕಠಿಣ ಪರಿಶ್ರಮ ಪಟ್ಟಿದ್ದಾರೆ ಮತ್ತು ಗಮನಾರ್ಹ ಸಮರ್ಪಣೆ ಮತ್ತು ದೃಢಸಂಕಲ್ಪವನ್ನು ತೋರಿಸಿದ್ದಾರೆ. ಭಾರತ ತನ್ನ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಪಡುತ್ತದೆ. ಅವರು ಅತ್ಯುತ್ತಮ ನಿರ್ವಹಣೆ ತೋರಲಿ, ಚೆನ್ನಾಗಿ ಆಡಲಿ ಮತ್ತು ಮಿಂಚಲಿ!
| ನರೇಂದ್ರ ಮೋದಿ, ಪ್ರಧಾನಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net