ಸಿಎಂ ಕಪ್ ಬ್ಯಾಡ್ಮಿಂಟನ್​ ಟೂರ್ನಿಗೆ ಅದ್ದೂರಿ ಚಾಲನೆ

ಸಿಎಂ ಕಪ್ ಬ್ಯಾಡ್ಮಿಂಟನ್​ ಟೂರ್ನಿಗೆ ಅದ್ದೂರಿ ಚಾಲನೆ
ಸಿಎಂ ಕಪ್ ಬ್ಯಾಡ್ಮಿಂಟನ್​ ಟೂರ್ನಿಗೆ ಅದ್ದೂರಿ ಚಾಲನೆ
Published on
ಬೆಂಗಳೂರು: 9 ಡ್ರೀಮ್ಸ್ ಸಂತೆಯಿಂದ ಆಯೋಜಿಸಲಾಗಿರುವ ವಿನೂತನ ಮಾದರಿಯ ಸಿಎಂ ಕಪ್-2026 (CM CUP) ಬ್ಯಾಡ್ಮಿಂಟನ್ (Badminton)​ ಟೂರ್ನಿಗೆ ಶನಿವಾರ ಅದ್ದೂರಿ ಚಾಲನೆ ನೀಡಲಾಯಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರು ಷಟಲ್ ಬ್ಯಾಡ್ಮಿಂಟನ್ ಆಡುವ ಮೂಲಕ ಸಿಎಂ ಕಪ್ ಪಂದ್ಯಾವಳಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು ಆಟಗಾರರಾಗಿ ಕಣಕ್ಕಿಳಿದಿರುವುದು ಉತ್ತಮ ವಿಚಾರ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವರ ಮೂಲಕ ಕೆಲಸದ ಒತ್ತಡದಿಂದ ಕೊಂಚ ಹೊರಬರುವಂತಾಗಿದೆ. ಸಿಎಂ ಕಪ್ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಒಬ್ಬರಿಗೊಬ್ಬರು ಪರಿಚಯವಾಗುವಂತಾಗಿದೆ. ಈ ರೀತಿಯ ಪಂದ್ಯಾವಳಿಗಳು ಪ್ರತಿ ವರ್ಷ ಆಯೋಜನೆಗೊಳ್ಳಬೇಕು ಎಂದು ಆಶಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜು, ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸಚಿವ ಜಮೀರ್ ಅಹಮದ್ ಖಾನ್ ಅವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್, ಕಾಯರ್ ಬೋರ್ಡ್ ಅಧ್ಯಕ್ಷ ನಟರಾಜ್ ಜಾನಕಿರಾಮ್, ಕರ್ನಾಟಕ ಕುಸ್ತಿ ಫೆಡರೇಷನ್ ಅಧ್ಯಕ್ಷ ಗುಣರಂಜನ್ ಶೆಟ್ಟಿ, ಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದು ಶುಭ ಹಾರೈಸಿದರು.
8 ತಂಡಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ
ಪಂದ್ಯಾವಳಿಯ ಮೊದಲ ದಿನ ಲೀಗ್ ಹಂತದ ಪಂದ್ಯಗಳು ನಡೆದಿದ್ದು, 8 ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಅಂಗಣ ಸಾಕ್ಷಿಯಾಯಿತು. ಸೆಮಿಫೈನಲ್ ಗೆ ಯಾವ ತಂಡಗಳು ಪ್ರವೇಶಿಸಲಿವೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಪಂದ್ಯಾವಳಿಯ ಎರಡನೇ ದಿನವಾದ ಭಾನುವಾರ ಬೆಳಗ್ಗೆ ನಡೆಯುವ ಲೀಗ್ ಹಂತದ ಅಂತಿಮ ಪಂದ್ಯಗಳು ಸೆಮಿಫೈನಲ್ ಗೆ ಯಾವ ತಂಡಗಳು ಪ್ರವೇಶಿಸುತ್ತವೆ ಎಂಬುದನ್ನು ನಿರ್ಧರಿಸಲಿವೆ. ಭಾನುವಾರ ಸಂಜೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net