ವಿಶ್ವದರ್ಜೆಯ ತರಬೇತುದಾರರನ್ನು ರೂಪಿಸುವ ಗುರಿಯೊಂದಿಗೆ ಆರಂಭವಾಗಿರುವ ISCE, ತಾಂತ್ರಿಕ ತರಬೇತಿಗೆ ಮಾತ್ರ ಸೀಮಿತಗೊಳ್ಳದೆ, ದೈಹಿಕ ಸಾಕ್ಷರತೆ, ಕ್ರೀಡಾ ವಿಜ್ಞಾನ, ಕ್ರೀಡಾ ನಿರ್ವಹಣೆ, ತಂತ್ರಜ್ಞಾನ ಹಾಗೂ ವೃತ್ತಿಪರ ಅಭಿವೃದ್ಧಿಯಂತಹ ಆಧುನಿಕ ಕ್ಷೇತ್ರಗಳನ್ನು ಒಳಗೊಂಡಿದೆ. ಉನ್ನತ ಮಟ್ಟದ ಕ್ರೀಡೆಗಳ ಬದಲಾಗುತ್ತಿರುವ ಬೇಡಿಕೆಗಳಿಗೆ ತರಬೇತುದಾರರನ್ನು ಸಮರ್ಥವಾಗಿ ಸಜ್ಜುಗೊಳಿಸಲು ಇದು ಬಹುಶಿಸ್ತೀಯ (Multidisciplinary) ತರಬೇತಿ ಕಾರ್ಯಕ್ರಮಗಳನ್ನು ಒದಗಿಸಲಿದೆ. ಅಲ್ಲದೆ, ಭಾರತದಾದ್ಯಂತ ಕ್ರೀಡಾ ತರಬೇತಿಯ ಶ್ರೇಷ್ಠತೆಯನ್ನು ಮುನ್ನಡೆಸಲು, ಸರ್ಕಾರಿ ಸಂಸ್ಥೆಗಳು, ಭಾರತೀಯ ಕ್ರೀಡಾ ಪ್ರಾಧಿಕಾರ (SAI), ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು, ಸಂಘ-ಸಂಸ್ಥೆಗಳು, ಉನ್ನತ ಕಾರ್ಯಕ್ಷಮತೆ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಖಾಸಗಿ ಕ್ಷೇತ್ರದೊಂದಿಗೆ ನಿಕಟವಾಗಿ ಕೈಜೋಡಿಸಿ ಪ್ರಮುಖ ಜ್ಞಾನ-ಹಂಚಿಕೆ ವೇದಿಕೆಯಾಗಿ ಇದು ಕಾರ್ಯನಿರ್ವಹಿಸಲಿದೆ.