ಟೋಕಿಯೊ ಪ್ಯಾರಾಲಿಂಪಿಕ್ಸ್​: ಬ್ಯಾಡ್ಮಿಂಟನ್​ನಲ್ಲಿ ಸ್ವರ್ಣ ಗೆದ್ದ ಕೃಷ್ಣ ನಗರ್, ಭಾರತಕ್ಕೆ 5ನೇ ಚಿನ್ನದ ಪದಕ​

Krishna Nagar
Published on

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಆರ್ಭಟ ಜೋರಾಗಿದ್ದು, ಪದಕ ಬೇಟೆ ಮುಂದುವರಿದಿದೆ. ಬ್ಯಾಡ್ಮಿಂಟನ್​ ವಿಭಾಗದಲ್ಲಿ ಕನ್ನಡಿಗ ಸುಹಾಸ್​ ಯತಿರಾಜ್​ ಭಾನುವಾರ ಬೆಳ್ಳಿ ಪದಕವನ್ನು ಜಯಿಸಿದ ಬೆನ್ನಲ್ಲೇ ಬ್ಯಾಡ್ಮಿಂಟನ್​ನಲ್ಲೇ ಕೃಷ್ಣ ನಗರ್​ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತಕ್ಕೆ ಒಟ್ಟು 5 ಚಿನ್ನದ ಪದಕ ಒಲಿದು ಬಂದಂತಾಗಿದೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್​ (ಎಸ್​ಎಚ್​6) ಈವೆಂಟ್​ನಲ್ಲಿ ಹಾಂಗ್​ಕಾಂಗ್​ನ ಚು ಮನ್​ ಕೈ ವಿರುದ್ಧ ಗೆಲುವ ದಾಖಲಿಸುವ ಮೂಲಕ ಕೃಷ್ಣ ನಗರ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಭಾರತ ಈವರೆಗೂ ಐದು ಚಿನ್ನದ ಪದಕವನ್ನು ಗೆದ್ದಿದ್ದು, ಒಟ್ಟು 19 ಪದಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದೆ.

ಮೂರು ಸುತ್ತಿನ ಪಂದ್ಯದಲ್ಲಿ ಪ್ರಬಲ ಹೋರಾಟ ನಡೆಸಿದ ಕೃಷ್ಣ ನಗರ್​ 21-17, 16-21 ಹಾಗೂ 21-17 ಅಂಕಗಳೊಂದಿಗೆ ಫೈನಲ್​ನಲ್ಲಿ ಗೆಲವು ದಾಖಲಿಸುವ ಮೂಲಕ ಭಾರತಕ್ಕೆ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ 5ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಚಿನ್ನ ಗೆದ್ದ ಕೃಷ್ಣ ನಗರ್​ಗೆ ಸಾಕಷ್ಟು ಅಭಿನಂದನೆಗಳು ಹರಿದುಬರುತ್ತಿವೆ. 

ಇಂದು ಬೆಳಗ್ಗೆಯಷ್ಟೇ ಪುರುಷರ ಎಸ್​ಎಲ್​4 ಕ್ಯಾಟಗರಿಯಲ್ಲಿ ಫೈನಲ್​ ಪಂದ್ಯದಲ್ಲಿ ಫ್ರಾನ್ಸ್​ ಚಾಂಪಿಯನ್​ ಲುಕಾಸ್​ ಮಜೂರ್​ ವಿರುದ್ಧ 21-15, 21-15-21 ಅಂತರದಲ್ಲಿ ಸೋಲನ್ನು ಅನುಭವಿಸುವ ಮೂಲಕ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿ ಸುಹಾಸ್​ ಯತಿರಾಜ್​ ಪಟ್ಟುಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net