

ಷಾ ಆಲಂ (ಮಲೇಷ್ಯಾ): ಭಾರತ ಮಹಿಳಾ ತಂಡ ಏಷ್ಯಾ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಪದಕ ಖಾತ್ರಿಪಡಿಸಿಕೊಂಡಿದೆ. ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಸಾರಥ್ಯದ ತಂಡ 3-0ಯಿಂದ ಹಾಂಕಾಂಗ್ ತಂಡವನ್ನು ಮಣಿಸಿ ಸೆಮಿೈನಲ್‌ಗೇರುವ ಮೂಲಕ ಟೂರ್ನಿಯ ಇತಿಹಾಸದಲ್ಲಿ ಮೊಟ್ಟಮೊದಲ ಪದಕ ಖಚಿತಪಡಿಸಿಕೊಂಡಿದೆ. ಆದರೆ ಪುರುಷರ ವಿಭಾಗದಲ್ಲಿ ಭಾರತ ತಂಡ ಕ್ವಾರ್ಟರ್‌ೈನಲ್‌ನಲ್ಲಿ ಸೋತು ಹೊರಬಿದ್ದಿತು.
ಅಗ್ರ ಶ್ರೇಯಾಂಕಿತ ಚೀನಾ ತಂಡವನ್ನು ಮಣಿಸಿ ಗುಂಪಿನ ಅಗ್ರಸ್ಥಾನಿ ಎನಿಸಿದ್ದ ಭಾರತ ಮಹಿಳಾ ತಂಡ ಶುಕ್ರವಾರ ನಡೆದ ಮುಖಾಮುಖಿಯ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು, ಆಶ್ಮಿತಾ ಚಲಿಹಾ ಹಾಗೂ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೋ ಜೋಡಿ ಗೆಲುವು ದಾಖಲಿಸುವುದರೊಂದಿಗೆ ಅಧಿಕಾರಯುತ ವಿಜಯ ದಾಖಲಿಸಿತು. ಉಪಾಂತ್ಯದಲ್ಲಿ ಜಪಾನ್ ಅಥವಾ ಚೀನಾ ತಂಡವನ್ನು ಎದುರಿಸಲಿದೆ.
ಗಾಯದಿಂದ ಚೇತರಿಸಿಕೊಂಡ ಬಳಿಕ ಪುನರಾಗಮನ ಕಂಡಿರುವ ಪಿವಿ ಸಿಂಧು 21-7, 16-21, 21-12 ರಿಂದ ಕೆಳಶ್ರೇಯಾಂಕಿತೆ ವಿಶ್ವ ನಂ.77 ಲೊ ಸಿನ್ ಯಾನ್ ಎದುರು ಹೋರಾಟಯುತ ಗೆಲುವು ದಕ್ಕಿಸಿಕೊಂಡರು.
ಪುರುಷರ ತಂಡಕ್ಕೆ ನಿರಾಸೆ: ಭಾರತ ಪುರುಷರ ತಂಡ ಎಂಟರ ಘಟ್ಟದಲ್ಲಿ 2-3ರಿಂದ ಜಪಾನ್ ಎದುರು ಸೋಲುಂಡಿತು. ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ 16-21, 24-26 ರಿಂದ ಕೆಂಟಾ ನಿಶಿಮೊಟೋಗೆ ಮಣಿದರು. ಬಳಿಕ ಡಬಲ್ಸ್‌ನಲ್ಲಿ ವಿಶ್ವ ನಂ.1 ಸಾತ್ವಿಕ್ ಸಾಯಿರಾಜ್- ಚಿರಾಗ್ ಶೆಟ್ಟಿ ಜೋಡಿ ಗೆದ್ದು ಸಮಬಲ ತಂದಿತು. ಮತ್ತೊಂದು ಸಿಂಗಲ್ಸ್‌ನಲ್ಲಿ ಲಕ್ಷ್ಯಸೇನ್ ಗೆದ್ದು ಮುನ್ನಡೆ ಒದಗಿಸಿದರು. ಬಳಿಕ 2ನೇ ಡಬಲ್ಸ್‌ನಲ್ಲಿ ಎಂಆರ್ ಅರ್ಜುನ್-ಧ್ರುವ್ ಕಪಿಲ ಜೋಡಿ ಸೋತರೆ, ನಿರ್ಣಾಯಕ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್ ಆರಂಭಿಕ ಮುನ್ನಡೆಯನ್ನು ಬಿಟ್ಟುಕೊಟ್ಟು ಕೆಂಟೋ ಮೊಮೊಟ ಎದುರು 21-17, 9-21, 20-22ರಿಂದ ಮುಗ್ಗರಿಸಿದರು.