Pakistan ತಂಡದ ನಾಯಕತ್ವ ತ್ಯಜಿಸಿದ ಬಾಬರ್ ಅಜಂ

Babar Azam
Published on

ನವದೆಹಲಿ: ಪಾಕಿಸ್ತಾನ (Pakistan) ಕ್ರಿಕೆಟ್​ ತಂಡದ ನಾಯಕತ್ವದಿಂದ ಬಾಬರ್​ ಅಜಂ (Babar Azam) ಕೆಳಗಿಳಿದಿದ್ದಾರೆ. ಈ ಹಿಂದೆ ಟೆಸ್ಟ್​ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ಬಾಬರ್​ ಇದೀಗ ಏಕದಿನ ಹಾಗೂ ಟಿ20 ಮಾದರಿಗೆ ರಾಜೀನಾಮೆ ನೀಡಿದ್ದಾರೆ.

2023ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ತಂಡದ ನೀರಸ ಪ್ರದರ್ಶನದ ನಂತರ ಬಾಬರ್​ ಅಜಂರನ್ನು ವೈಟ್​ ಬಾಲ್​ ನಾಯಕತ್ವದಿಂದ ಪಿಸಿಬಿ ತೆಗೆದು ಹಾಕಿತ್ತು. ಇದಾದ ಬಳಿಕ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಈ ವರ್ಷ ಮಾರ್ಚ್​ ತಿಂಗಳಲ್ಲಿ ಬಾಬರ್​ ಅಜಂರನ್ನು ವೈಟ್​ಬಾಲ್​ ಮಾದರಿಗೆ ನಾಯಕನನ್ನಾಗಿ ನೇಮಿಸಲಾಗಿತ್ತು.

ಟಿ20 ವಿಶ್ವಕಪ್​ನಲ್ಲಿ ಬಾಬರ್ ಆಝಂ ಮುಂದಾಳತ್ವದಲ್ಲಿ ಕಣಕ್ಕಿಳಿದ ಪಾಕ್ ಪಡೆಯು ಯುಎಸ್​ಎ ವಿರುದ್ದ ಪರಾಜಯಗೊಳ್ಳುವ ಮೂಲಕ ಭಾರೀ ಮುಖಭಂಗಕ್ಕೊಳಗಾಗಿತ್ತು. ಅಲ್ಲದೇ ಟೂರ್ನಿಯಲ್ಲಿ ಹೀನಾಯ ಪ್ರದರ್ಶನದಿಂದಾಗಿ ಮೊದಲ ಸುತ್ತಿನಲ್ಲೇ ತಂಡ ಹೊರಬಿದ್ದಿತ್ತು. ಭವಿಷ್ಯದ ದೃಷ್ಟಿಯಿಂದ ಬಾಬರ್​ರನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಇದೀಗ ಅವರೇ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ ಸೇರಿದಂತೆ ಮುಂಬರುವ ಸರಣಿಗಳಲ್ಲಿ ತಂಡವನ್ನು ಮುನ್ನಡೆಸಲು ಸಮರ್ಥ ನಾಯಕನ ಅವಶ್ಯಕತೆಯಿದ್ದು, ಪಾಕಿಸ್ತಾನ ಕ್ರಿಕೆಟ್​ ಮಂಡಳಿ ವಿಕೆಟ್​ ಕೀಪರ್, ಬ್ಯಾಟರ್​ ಮೊಹಮ್ಮದ್​ ರಿಜ್ವಾನ್​ಗೆ ನಾಯಕತ್ವ ನೀಡುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net