

ರಾಜ್ಕೋಟ್: ತಮಿಳುನಾಡಿನ ಆಲ್ರೌಂಡರ್ ಬಾಬಾ ಇಂದ್ರಜಿತ್ ತುಟಿಗೆ ಆದ ಗಂಭೀರ ಗಾಯದಿಂದಾಗಿ ಬಾಯಿತುಂಬ ಬ್ಯಾಂಡೇಜ್ ಹಚ್ಚಿಕೊಂಡಿದ್ದ ನಡುವೆಯೂ ವಿಜಯ್ ಹಜಾರೆ ಟ್ರೋಫಿಯ ಮೊದಲ ಸೆಮಿಫೈನಲ್ನಲ್ಲಿ ಹರಿಯಾಣ ಎದುರು ಕಣಕ್ಕಿಳಿದಿದ್ದಲ್ಲದೆ, 64 ರನ್ ಬಾರಿಸಿ ಗಮನಸೆಳೆದರು.
29 ವರ್ಷದ ಬಾಬಾ ಇಂದ್ರಜಿತ್ ಅವರ ಈ ಸಾಹಸದಿಂದ ತಮಿಳುನಾಡಿಗೆ ಗೆಲುವು ತಂದುಕೊಡದಿದ್ದರೂ, ಕ್ರಿಕೆಟ್ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು.
ಬುಧವಾರ ನಡೆದ ಪಂದ್ಯದಲ್ಲಿ ಇನಿಂಗ್ಸ್ ವಿರಾಮದ ನಡುವೆ ಬಾತ್ರೂಂನಲ್ಲಿ ಜಾರಿಬಿದ್ದ ಕಾರಣದಿಂದಾಗಿ ಬಾಬಾ ಇಂದ್ರಜಿತ್ ತುಟಿಗೆ ಗಾಯವಾಗಿತ್ತು. ಇದರಿಂದ ತುಟಿಗೆ ಹಲವು ಸ್ಟಿಚ್ ಕೂಡ ಬಿದ್ದಿತ್ತು. ಇದರ ನಡುವೆಯೂ ಆಡಿದ ಅವರನ್ನು, ವೆಸ್ಟ್ ಇಂಡೀಸ್ನಲ್ಲಿ ದವಡೆಗೆ ಗಾಯವಾಗಿದ್ದರೂ, ಬ್ಯಾಂಡೇಜ್ ಕಟ್ಟಿಕೊಂಡು ಆಡಿ ದಿಟ್ಟತನ ತೋರಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಅವರ ಸಾಹಸದೊಂದಿಗೆ ಹೋಲಿಸಲಾಗುತ್ತಿದೆ.