

ನವದೆಹಲಿ: ವಿದರ್ಭ ತಂಡದ ನಾಯಕ, ಕನ್ನಡಿಗ ಕರುಣ್ ನಾಯರ್ ಸಹ ಮೂರನೇ ಶತಕ ಸಿಡಿಸಿ, ಒಟ್ಟಾರೆ 430 ರನ್‌ಗಳೊಂದಿಗೆವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿದ್ದಾರೆ. ಆಡಿದ 4 ಇನಿಂಗ್ಸ್‌ಗಳಲ್ಲಿ ಕರುಣ್ ಅಜೇಯವಾಗಿ ಉಳಿದಿದ್ದಾರೆ. ಮಯಾಂಕ್ (428) ನಂತರದ ಸ್ಥಾನದಲ್ಲಿದ್ದಾರೆ. ತಮಿಳುನಾಡು ನೀಡಿದ 256 ರನ್‌ಗೆ ಪ್ರತಿಯಾಗಿ ಕರುಣ್ ನಾಯರ್ (111* ರನ್, 103 ಎಸೆತ, 14 ಬೌಂಡರಿ,1 ಸಿಕ್ಸರ್) ಶತಕದ ನೆರವಿನಿಂದ ವಿದರ್ಭ 43.5 ಓವರ್‌ಗಳಲ್ಲಿ 4 ವಿಕೆಟ್‌ಗೆ 257 ರನ್‌ಗಳಿಸಿ 6 ವಿಕೆಟ್‌ಗಳಿಂದ ಗೆದ್ದು ಬೀಗಿತು.
ಅಭಿಷೇಕ್ ಅಬ್ಬರ, ಪಂಜಾಬ್ 5ನೇ ಗರಿಷ್ಠ ಮೊತ್ತ
ನಾಯಕ ಅಭಿಷೇಕ್ ಶರ್ಮ (170 ರನ್, 96 ಎಸೆತ, 22 ಬೌಂಡರಿ, 8 ಸಿಕ್ಸರ್) ಹಾಗೂ ಪ್ರಭ್‌ಸಿಮ್ರನ್ ಸಿಂಗ್ (125 ರನ್, 95 ಎಸೆತ, 11 ಬೌಂಡರಿ, 8 ಸಿಕ್ಸರ್) ಮೊದಲ ವಿಕೆಟ್‌ಗೆ ಪೇರಿಸಿದ 298 ರನ್‌ಗಳ ನೆರವಿನಿಂದ ಪಂಜಾಬ್ ತಂಡ, ಸೌರಾಷ್ಟ್ರ ಎದುರು 5 ವಿಕೆಟ್‌ಗೆ 424 ರನ್ ಪೇರಿಸಿತು. ಇದು ಟೂರ್ನಿಯ ಐದನೇ ಗರಿಷ್ಠ ಮೊತ್ತ ಎನಿಸಿದೆ. ಪ್ರತಿಯಾಗಿ ಸೌರಾಷ್ಟ್ರ ಭರ್ತಿ 50 ಓವರ್‌ಗಳಲ್ಲಿ 367 ರನ್‌ಗಳಿಗೆ ಸರ್ವಪತನ ಕಂಡಿತು. ತಮಿಳುನಾಡು 2 ವಿಕೆಟ್‌ಗೆ 506 ರನ್‌ಗಳಿಸಿರುವುದು ಟೂರ್ನಿಯ ಗರಿಷ್ಠ ಮೊತ್ತವಾಗಿದೆ.
ಜೈಸ್ವಾಲ್ ದಾಖಲೆ ಮುರಿದ ಆಯುಷ್ ಮಹಾತ್ರೆ: ಮುಂಬೈ ತಂಡದ ಆಯುಷ್ ಮಹಾತ್ರೆ (17 ವರ್ಷ, 168ದಿನ) ಲಿಸ್ಟ್ ಎ ಕ್ರಿಕೆಟ್‌ನಲ್ಲಿ 150 ಪ್ಲಸ್ ರನ್‌ಗಳಿಸಿದ ಕಿರಿಯ ಆಟಗಾರ ಎನಿಸಿದ್ದು, ಭಾರತ ಟೆಸ್ಟ್ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್ (17 ವರ್ಷ, 291 ದಿನ) ದಾಖಲೆಯನ್ನು ಮುರಿದರು. ನಾಗಾಲ್ಯಾಂಡ್ ಎದುರು 117 ಎಸೆತಗಳಲ್ಲಿ 15 ಬೌಂಡರಿ, 11 ಸಿಕ್ಸರ್ ಒಳಗೊಂಡ 181 ರನ್ ಕಲೆಹಾಕುವ ಮೂಲಕ ಮಹತ್ರೆ ಈ ಸಾಧನೆ ಮಾಡಿದ್ದಾರೆ.
ಮಯಾಂಕ್‌ಗೆ ಹ್ಯಾಟ್ರಿಕ್ ಸೆಂಚುರಿ ಸಿಹಿ, ಕರ್ನಾಟಕಕ್ಕೆ ಸೋಲಿನ ಕಹಿ
ನಾಯಕ ಮಯಾಂಕ್ ಅಗರ್ವಾಲ್ (124 ರನ್, 112 ಎಸೆತ, 15 ಸಿಕ್ಸರ್, 2 ಬೌಂಡರಿ) ಸಿಡಿಸಿದ ಸತತ ಮೂರನೇ ಶತಕ ನಡುವೆಯೂ ಸ್ಲಾಗ್ ಓವರ್‌ಗಳಲ್ಲಿ ಬೌಲರ್‌ಗಳ ವೈಲ್ಯದಿಂದಾಗಿ ಕರ್ನಾಟಕ ತಂಡ ಪ್ರತಿಷ್ಠಿತ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ಸೋಲು ಕಂಡಿದೆ. ಬ್ಯಾಟರ್ ವರುಣ್ ಗೌಡ್ (109* ರನ್, 82 ಎಸೆತ, 7 ಬೌಂಡರಿ, 5 ಸಿಕ್ಸರ್) ಸಾಹಸದಿಂದ ಹೈದರಾಬಾದ್ ತಂಡ 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ ಸೋಲಿನ ಕಹಿ ಎದುರಿಸಿದ ಮಯಾಂಕ್ ಅಗರ್ವಾಲ್ ಪಡೆ ಸಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿದಿದೆ.