ಪ್ಲಿಸ್ಕೋವಾ, ಸ್ವಿಟೋಲಿನಾ, ಬೆನ್ಸಿಕ್​ಗೆ ಆಘಾತ

PF 25 Jan 20
Published on

ಮೆಲ್ಬೋರ್ನ್: ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್​ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶಗಳು ಆರನೇ ದಿನವೂ ಮುಂದುವರಿದಿದ್ದು, ಅಗ್ರ 10 ಶ್ರೇಯಾಂಕಿತರಲ್ಲಿ ಈಗ ನಾಲ್ವರು ಆಟಗಾರ್ತಿಯರು ಮಾತ್ರ ನಾಲ್ಕನೇ ಸುತ್ತಿಗೇರುವಲ್ಲಿ ಸಫಲರಾಗಿದ್ದಾರೆ. 2ನೇ ಶ್ರೇಯಾಂಕಿತೆ ಕ್ಯಾರೊಲಿನ್ ಪ್ಲಿಸ್ಕೋವಾ, 5ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ ಮತ್ತು 6ನೇ ಶ್ರೇಯಾಂಕಿತೆ ಬೆಲಿಂಡಾ ಬೆನ್ಸಿಕ್ ಶನಿವಾರ 3ನೇ ಸುತ್ತಿನಲ್ಲಿ ಸವಾಲು ಅಂತ್ಯಗೊಳಿಸಿದರು. ಮತ್ತೊಂದೆಡೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ರಾಫೆಲ್ ನಡಾಲ್, 4ನೇ ಶ್ರೇಯಾಂಕಿತ ಡೆನಿಲ್ ಮೆಡ್ವೆಡೇವ್ ಮತ್ತು 5ನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಪ್ರಿ ಕ್ವಾರ್ಟರ್​ಫೈನಲ್​ಗೇರುವಲ್ಲಿ ಸಫಲರಾಗಿದ್ದಾರೆ.

ಮುನ್ನಡೆದ ಮುಗುರುಜಾ, ಕ್ವಿಟೋವಾ: ಅಗ್ರ ತಾರೆಯರ ನಿರ್ಗಮನದ ಬೆನ್ನಲ್ಲೇ ತಮ್ಮ ಆಟದಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದುಕೊಂಡಿರುವ ಸ್ಪೇನ್​ನ ಗಾರ್ಬಿನ್ ಮುಗುರುಜಾ 6-1, 6-2 ರಿಂದ ಉಕ್ರೇನ್​ನ ಎಲಿನಾ ಸ್ವಿಟೋಲಿನಾರನ್ನು ಸೋಲಿಸಿದರು. 4ನೇ ಶ್ರೇಯಾಂಕದ ಸಿಮೋನಾ ಹಲೆಪ್ 6-1, 6-4 ರಿಂದ ಕಜಾಕ್​ನ ಯೂಲಿಯಾ ಪುಟಿನ್​ತ್ಸೇವಾರನ್ನು ಸೋಲಿಸಿದರೆ, ಜರ್ಮನಿಯ ಏಂಜಲಿಕ್ ಕೆರ್ಬರ್ 6-2, 6-7 (7), 6-3 ರಿಂದ ಇಟಲಿಯ ಕ್ಯಾಮಿಲಾ ಜಿಯಾರ್ಜಿಯನ್ನು ಮಣಿಸಿದರು. ನೆದರ್ಲೆಂಡ್​ನ ಕಿಕಿ ಬರ್ತೆನ್ಸ್ 6-2, 7-6 (7) ರಿಂದ ಜರೀನಾ ಡಿಯಾಸ್​ರನ್ನು ಹೊರಹಾಕಿದರೆ, ಇಗಾ ಸ್ವಿಯಾಟೆಕ್ 7-5, 6-3 ರಿಂದ ಸ್ಟಾ್ಯನಿಸ್ಲಾಸ್ ವಾವ್ರಿಂಕಾರ ಪ್ರೇಯಸಿ ಡೊನಾ ವೆಕಿಕ್​ರನ್ನು ಸೋಲಿಸಿದರು. ಎಲಿಸ್ ಮರ್ಟೆನ್ಸ್ 6-1, 6-7 (7), 6-0 ಯಿಂದ ಕ್ಯಾಥರಿನ್ ಬೆಲ್ಲಿಸ್​ರನ್ನು ಮಣಿಸಿದರು.

ಪುರುಷರ ಸಿಂಗಲ್ಸ್​ನಲ್ಲಿ ಅಮೆರಿಕದ ಜಾನ್ ಐಸ್ನೆರ್ 2ನೇ ಸೆಟ್​ನ ವೇಳೆ ನಿವೃತ್ತಿಯಾಗಿದ್ದರಿಂದ ವಾವ್ರಿಂಕಾ ಹೆಚ್ಚಿನ ಪ್ರಯಾಸವಿಲ್ಲದೆ ಮುನ್ನಡೆದರು. 5ನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಗೆಲುವಿಗೆ ನಾಲ್ಕು ಸೆಟ್​ಗಳ ಪಂದ್ಯ ಆಡಿದರು. ಥೀಮ್ 6-2, 6-4, 7-6 (7), 6-4 ರಿಂದ ಅಮೆರಿಕದ ಟೇಲರ್ ಫ್ರಿಟ್ಜ್​ರನ್ನು ಸೋಲಿಸಿದರು.

ಸಿಡುಕು ಸ್ವಭಾವದಿಂದಲೇ ವಿಶ್ವ ಟೆನಿಸ್​ನ ‘ಬ್ಯಾಡ್ ಬಾಯ್’ ಆಗಿ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾದ ಟೆಂಪರ್​ವೆುಂಟಲ್ ಟೆನಿಸ್ ಸ್ಟಾರ್ ನಿಕ್ ರ್ಕಿಗಿಯೋಸ್ ಹಾಗೂ ಆಕ್ರಮಣಕಾರಿ ಆಟದಿಂದ ಜನಮನ್ನಣೆ ಪಡೆದುಕೊಂಡಿರುವ ವಿಶ್ವ ನಂ.1 ಆಟಗಾರ ರಾಫೆಲ್ ನಡಾಲ್ ನಡುವೆ ಬ್ಲಾಕ್​ಬಸ್ಟರ್ ನಾಲ್ಕನೇ ಸುತ್ತಿನ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಶನಿವಾರ ನಡೆದ ಪಂದ್ಯದಲ್ಲಿ 23ನೇ ಶ್ರೇಯಾಂಕದ ರ್ಕಿಗಿಯೋಸ್, ರಷ್ಯಾದ ಕಠಿಣ ಎದುರಾಳಿ ಕರೇನ್ ಕಚನೋವ್​ರನ್ನು 4 ಗಂಟೆ 26 ನಿಮಿಷಗಳ ಕಾಲ ನಡೆದ 5 ಸೆಟ್​ನ ಥ್ರಿಲ್ಲರ್ ಪಂದ್ಯದಲ್ಲಿ ಮಣಿಸಿದರೆ, ರಾಫೆಲ್ ನಡಾಲ್, ಕೇವಲ 1 ಗಂಟೆ 38 ನಿಮಿಷದ ಮುಖಾಮುಖಿಯಲ್ಲಿ ದೇಶಬಾಂಧವ ಪಾಬ್ಲೋ ಕರೇನೋ ಬುಸ್ಟಾರನ್ನು ಹೊರಹಾಕಿದರು. ಮೆಲ್ಬೋರ್ನ್ ಅರೇನಾದಲ್ಲಿ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಮೊದಲ ಎರಡು ಸೆಟ್ ಗೆಲ್ಲುವ ಮೂಲಕ ತೀರಾ ಸರಳವಾಗಿ ಆಸ್ಟ್ರೇಲಿಯನ್ ಓಪನ್​ನಲ್ಲಿ 2ನೇ ವಾರಕ್ಕೇರುವ ವಿಶ್ವಾಸದಲ್ಲಿದ್ದ ರ್ಕಿಗಿಯೋಸ್​ಗೆ ನಂತರದ ಎರಡು ಸೆಟ್​ಗಳಲ್ಲಿ ಕಚನೋವ್ ತಿರುಗೇಟು ನೀಡಿದರು. 3 ಹಾಗೂ 4ನೇ ಸೆಟ್​ನ ಟೈ ಬ್ರೇಕರ್​ನಲ್ಲಿ ಮ್ಯಾಚ್ ಪಾಯಿಂಟ್ ಅವಕಾಶವನ್ನು ರ್ಕಿಗಿಯೋಸ್ ಹಾಳು ಮಾಡಿಕೊಂಡರೂ, ಕೊನೆಗೆ 6-2, 7-6 (5), 6-7 (6), 7-6 (7), 7-6 (10) ರಿಂದ ಸತತ 2ನೇ ಪಂದ್ಯದಲ್ಲಿ 4 ಗಂಟೆಗಿಂತ ಅಧಿಕ ಕಾಲ ಹೋರಾಟ ನಡೆಸಿದ ಕಚನೋವ್​ರನ್ನು ಸೋಲಿಸಿದರು. ರಾಡ್ ಲೆವರ್ ಅರೇನಾದಲ್ಲಿ ನಡೆದ ದಿನದ ಆರಂಭಿಕ ಪಂದ್ಯಗಳಲ್ಲಿ ರಾಫೆಲ್ ನಡಾಲ್ 6-1, 6-2, 6-4 ರಿಂದ ಕರೇನೋ ಬುಸ್ಟಾರನ್ನು ಸೋಲಿಸಿದರೆ, ರಷ್ಯಾದ ಡೆನಿಲ್ ಮೆಡ್ವೆಡೇವ್ 6-4, 6-3, 6-2 ರಿಂದ ಆತಿಥೇಯ ದೇಶದ ಅಲೆಕ್ಸಿ ಪಾಪ್​ಯಿುರ್ನ್​ರನ್ನು ಮಣಿಸಿದರು.

ಪ್ಲಿಸ್ಕೋವಾ, ಬೆನ್ಸಿಕ್ ಔಟ್

ವೃತ್ತಿಜೀವನದ ಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದ ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಹಾಗೂ ಸ್ವಿಸ್​ನ ಪ್ರಮುಖ ತಾರೆ ಬೆಲಿಂಡಾ ಬೆನ್ಸಿಕ್ ಅಭಿಯಾನ ಕೊನೆಗೊಂಡಿದೆ. 2 ಗಂಟೆ 25 ನಿಮಿಷದ ಸುದೀರ್ಘ ಹೋರಾಟದಲ್ಲಿ ಕ್ಯಾರೋಲಿನಾ ಪ್ಲಿಸ್ಕೋವಾರನ್ನು ರಷ್ಯಾದ ಅನಸ್ತೇಷಿಯಾ ಪಾವ್ಲುಚೆಂಕೋವಾ 7-6 (4), 7-6 (3) ರಿಂದ ಸೋಲಿಸಿದರು. ಸೆರೇನಾ ವಿಲಿಯಮ್್ಸ, ನವೋಮಿ ಒಸಾಕ ಬಳಿಕ ನಿರ್ಗಮನ ಕಂಡ ಪ್ರಮುಖ ತಾರೆ ಎನಿಸಿದ್ದಾರೆ. ಇನ್ನೊಂದೆಡೆ 28ನೇ ಶ್ರೇಯಾಂಕದ ಆಟಗಾರ್ತಿ ಅನೆಟ್ ಕೊನಾಟವಿಟ್ 6-0, 6-1 ರಿಂದ ಸ್ವಿಜರ್ಲೆಂಡ್ ಆಟಗಾರ್ತಿ ಬೆಲಿಂಡಾ ಬೆನ್ಸಿಕ್​ರನ್ನು ಸೋಲಿಸಿದರು.

ಎರಡನೇ ಸುತ್ತಿಗೆ ಬೋಪಣ್ಣ

ಭಾರತದ ರೋಹನ್ ಬೋಪಣ್ಣ ಹಾಗೂ ಉಕ್ರೇನ್​ನ ನಾಡಿಯಾ ಕಿಚೆನಾಕ್ ಜೋಡಿ ಮಿಶ್ರ ಡಬಲ್ಸ್ ವಿಭಾದಲ್ಲಿ 2ನೇ ಸುತ್ತಿಗೆ ಪ್ರವೇಶಿಸಿದೆ. ಇಂಡೋ-ಉಕ್ರೇನ್ ಜೊಡಿ ಮೊದಲ ಸುತ್ತಿನಲ್ಲಿ 7-5, 4-6, 10-6 ರಿಂದ ಲ್ಯುಡ್ಮಿಲಾ ಕಿಚೆನಾಕ್ ಹಾಗೂ ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ ಜೋಡಿಯನ್ನು ಸೋಲಿಸಿತು. ಬೋಪಣ್ಣರ ಜೋಡಿ ನಾಡಿಯಾ ಕಿಚೆನಾಕ್ ಹಾಗೂ ಲ್ಯುಡ್ಮಿಲಾ ಕಿಚೆನಾಕ್ ಸಹೋದರಿಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net