ವಿರಾಟ್​ ಬಳಿಕ ಜಡೇಜಾರನ್ನು ಟಾರ್ಗೆಟ್​ ಮಾಡಿದ ಆಸ್ಟ್ರೇಲಿಯಾ ಮಾಧ್ಯಮಗಳು; ಸುಳ್ಳು ಆರೋಪದ Video Viral

Ravindra jadeja
Published on

ಮೆಲ್ಬೋರ್ನ್​: ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯವು ಡಿಸೆಂಬರ್​ 26ರಿಂದ ಮೆಲ್ಬೋರ್ನ್​ನಲ್ಲಿ ಆರಂಭವಾಗಲಿದ್ದು, ಬಾಕ್ಸಿಂಗ್​ ಡೇ ಟೆಸ್ಟ್​ಗಾಗಿ (Boxing Day Test) ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಇನ್ನೂ ಸರಣಿಯ ಮೂರನೇ ಪಂದ್ಯ ಮಳೆಯಿಂದಾಗಿ ನೀರಸ ಡ್ರಾಗೊಂಡಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫಿನಾಲೆ (World Test Championship Finale) ದೃಷ್ಠಿಯಲ್ಲಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ.

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಟೆಸ್ಟ್​​ ಸರಣಿ ಆರಂಭವಾದಾಗಿನಿಂದಲೂ ಸ್ಲೆಡ್ಜಿಂಗ್​ ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಮೈದಾನದ ಹೊರಗೆ ಹಾಗೂ ಒಳಗೆ ಆಸ್ಟ್ರೇಲಿಯಾ ತಂಡದ ಆಟಗಾರರು ಟೀಮ್​ ಇಂಡಿಯಾದವರನ್ನು ಗುರಿಯಾಗಿಸಿ ಸ್ಲೆಡ್ಜಿಂಗ್​​ ಮಾಡುವುದನ್ನು ನಾವು ಗಮನಿಸಿದ್ದೇವೆ. ಇದೀಗ ಈ ತಂತ್ರವನ್ನು ಆಸ್ಟ್ರೇಲಿಯಾದ ಮಾಧ್ಯಮಗಳು ಅನುಸರಿಸುತ್ತಿದ್ದು, ಭಾರತೀಯ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ (Video Viral) ಆಗಿದೆ.

ಡಿಸೆಂಬರ್​​ 19ರಂದು ವಿರಾಟ್​ ಕೊಹ್ಲಿ ಮೆಲ್ಬೋರ್ನ್​ಗೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿನ ವರದಿಗಾರ್ತಿಯೊಬ್ಬರ ಜತೆ ಜಗಳವಾಡಿದ್ದರು ಎಂದು ಸುದ್ದಿಯನ್ನು ಹಬ್ಬಿಸಲಾಗಿತ್ತು. ಇದೀಗ ರವೀಂದ್ರ ಜಡೇಜಾರನ್ನು ಟಾರ್ಗೆಟ್​ ಮಾಡಿರುವ ಆಸ್ಟ್ರೇಲಿಯಾದ ಮಾಧ್ಯಮಗಳು ಅವರ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿವೆ. ಈ ಮೂಲಕ ಸ್ಲೆಡ್ಜಿಂಗ್​ ವಿಚಾರವಾಗಿ ಆಸ್ಟ್ರೇಲಿಯಾ ಮಾಧ್ಯಮಗಳು ತಮ್ಮ ಆಟಗಾರರ ಬೆನ್ನಿಗೆ ನಿಂತಿರುವುದು ಕಳವಳಕಾರಿಯಾಗಿದೆ.

ಡಿಸೆಂಬರ್​ 21ರಂದು ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಅಭ್ಯಾಸ ನಡೆಸಿತ್ತು. ಅಭ್ಯಾಸದ ಬಳಿಕ ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಭಾರತ ಹಾಗೂ ಆಸ್ಟ್ರೇಲಿಯಾದ ಪತ್ರಕರ್ತರು ಹಾಜರಿದ್ದರು. ಭಾರತೀಯ ಪತ್ರಕರ್ತರು ಕೇಳಿದ ಪ್ರಶ್ನೆಗೆ ಜಡೇಜಾ ಹಿಂದಿಯಲ್ಲೇ ಉತ್ತರಿಸಿದ್ದಾರೆ. ಆದರೆ, ಸಮಯದ ಅಭಾವದಿಂದ ಪ್ರಶ್ನೆಗಳನ್ನು ಕೇಳಲು ಅವಕಾಶವಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಆಸ್ಟ್ರೇಲಿಯಾದ ಮಾಧ್ಯಮಗಳು ಪ್ರಶ್ನೆಯನ್ನ ಕೇಳದೆ ಇದ್ದರೂ ಜಡೇಜಾ ಇಂಗ್ಲಿಷ್​ನಲ್ಲಿ ಉತ್ತರಿಸಲು ನಿರಾಕರಿಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಭಾರತೀಯ ಆಟಗಾರರ ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ಮಾಡಿದ್ದಾವೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ಪತ್ರಕರ್ತರು ಆಸೀಸ್ ಮಾಧ್ಯಮಗಳ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಪತ್ರಿಕಾಗೋಷ್ಠಿಗೆ ಭಾರತೀಯ ಮಾಧ್ಯಮಗಳನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಷ್ಟೇ ಅಲ್ಲ, ಜಡೇಜಾ ಸಾಮಾನ್ಯವಾಗಿ ಹಿಂದಿಯಲ್ಲಿ ಆರಾಮದಾಯಕವಾಗಿ ಉತ್ತರಿಸುತ್ತಾರೆ. ನಾವು ಹಿಂದಿಯಲ್ಲಿ ಪ್ರಶ್ನೆ ಕೇಳಿದೆವು. ಅವರು ಹಿಂದಿಯಲ್ಲೇ ಉತ್ತರಿಸಿದರು ಎಂದು ಭಾರತೀಯ ಪತ್ರಕರ್ತರು ಆಸೀಸ್​ ಮಾಧ್ಯಮಗಳ ಸುಳ್ಳು ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಇದಲ್ಲದೆ ಆಸೀಸ್​ ಮಾಧ್ಯಮ ಪ್ರತಿನಿಧಿಗಳು ಭಾರತೀಯ ಮಾಧ್ಯಮ ವ್ಯವಸ್ಥಾಪಕ ಮೌಲಿನ್ ಪಾರಿಖ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಇದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೊದಲು ವಿರಾಟ್​ರನ್ನು ಟಾರ್ಗೆಟ್​ ಮಾಡಿದ್ದ ಆಸೀಸ್​ ಮಾಧ್ಯಮಗಳು ಇದೀಗ ಜಡೇಜಾರನ್ನು ಗುರಿಯಾಗಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net