

ಬೆಂಗಳೂರು: ಆಸ್ಟ್ರೆಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಶಾನ್ ಮಾರ್ಷ್ ಮೂರನೇ ಬಾರಿಗೆ ಅಪ್ಪನಾಗುತ್ತಿದ್ದಾರೆ. ಈ ಕುರಿತು ಮಾರ್ಷ್ ಪತ್ನಿ ರೆಬೆಕ್ಕಾ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕುಟುಂಬದ ಜತೆ ಬೀಚ್ನಲ್ಲಿರುವ ಫೋಟೋ ಪ್ರಕಟಿಸಿ ರೆಬೆಕ್ಕಾ, ಗರ್ಭಿಣಿಯಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಶಾನ್ ಮಾರ್ಷ್ ಹಾಗೂ ರೆಬೆಕ್ಕಾ 2015ರ ಏಪ್ರಿಲ್ನಲ್ಲಿ ಮದುವೆಯಾಗಿದ್ದರು. ಶಾನ್ ಮಾರ್ಷ್ ದಂಪತಿಗೆ ಈಗಾಗಲೇ ಒಂದು ಗಂಡು, ಹೆಣ್ಣು ಮಗುವಿದೆ..ರೆಬೆಕ್ಕಾ ವೃತ್ತಿಯಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಸ್ಫೋಟಕ ಬ್ಯಾಟಿಂಗ್ಗೆ ಹೆಸರಾಗಿರುವ ಶಾನ್ ಮಾರ್ಷ್ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಇದುವರೆಗೂ 38 ಟೆಸ್ಟ್, 73 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಿದ್ದಾರೆ. 2019ರ ಏಕದಿನ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧ ಕೊನೇ ಬಾರಿಗೆ ಆಸ್ಟ್ರೆಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದರು. 2016ರಲ್ಲಿ ಕಡೇ ಬಾರಿಗೆ ರಾಷ್ಟ್ರೀಯ ಟಿ20 ತಂಡದ ಪರ ಆಡಿದ್ದರು. ಐಪಿಎಲ್ನಲ್ಲಿ ಮಾರ್ಷ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿನಿಧಿಸಿದ್ದರು.