

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಟೂರ್ನಿಯ 24ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾ ತಂಡ 309 ರನ್ಗಳ ಭಾರೀ ಅಂತರದಿಂದ ದಾಖಲೆಯ ಜಯ ಸಾಧಿಸಿದೆ. ಡೇವಿಡ್ ವಾರ್ನರ್ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಅಬ್ಬರ ಮತ್ತು ಬೌಲರ್ಗಳ ದಾಳಿಗೆ ನಲುಗಿದ ನೆದರ್ಲೆಂಡ್ಸ್, ಆಸಿಸ್ ವಿರುದ್ಧ ಸುಲಭ ತುತ್ತಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 399 ರನ್ಗಳ ಬೃಹತ್ ಮೊತ್ತ ಪೇರಿಸಿತು. ಡೇವಿಡ್ ವಾರ್ನರ್ 93 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನೊಂದಿಗೆ 104 ರನ್ಗಳ ಶತಕ ಸಂಭ್ರಮಿಸಿದರು. ಸ್ಟೀವ್ ಸ್ಮಿತ್ (71) ಹಾಗೂ ಮಾರ್ನಸ್ ಲ್ಯಾಬುಶೇನ್ (62) ರನ್ ಗಳಿಸಿದರೆ, 6ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಗ್ಲೇನ್ ಮ್ಯಾಕ್ಸ್ವೆಲ್ ಅಬ್ಬರಿಸಿ ಬೊಬ್ಬಿರಿದರು. ಕೇವಲ 44 ಎಸೆತಗಳಲ್ಲಿ 9 ಬೌಂಡರಿ, 8 ಸಿಕ್ಸರ್ ನೆರವಿನೊಂದಿಗೆ 106 ರನ್ ಗಳಿಸಿ ಮಿಂಚುವ ಮೂಲಕ ತಮ್ಮ ತಂಡವೂ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು.
ಐರ್ಲೆಂಡ್ ಪರ ವ್ಯಾನ್ ಬೀಕ್ 4 ವಿಕೆಟ್ ಪಡೆದು ಮಿಂಚಿದರೆ, ಬಾಸ್ ಡಿ ಲೀಡ್ 2 ಹಾಗೂ ಆರ್ಯನ್ ದತ್ 1 ವಿಕೆಟ್ ಪಡೆದರು.
ಆಸಿಸ್ ನೀಡಿದ 400 ರನ್ಗಳ ಬೃಹತ್ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್, ಆಸಿಸ್ ಬೌಲರ್ಗಳ ದಾಳಿಗೆ ತತ್ತರಿಸಿ 21 ಓವರ್ಗಳಲ್ಲಿ ಕೇವಲ 90 ರನ್ಗಳಿಗೆ ಸರ್ವಪತನ ಕಂಡಿತು. ವಿಕ್ರಮ್ ಸಿಂಗ್ ಗಳಿಸಿದ 25 ರನ್ ತಂಡದ ವೈಯಕ್ತಿಕ ಗರಿಷ್ಠ ರನ್ ಆಗಿದೆ. ಉಳಿದಂತೆ ಯಾವೊಬ್ಬ ಆಟಗಾರನು ಸಹ ಬ್ಯಾಟಿಂಗ್ ಛಾಪು ಮೂಡಿಸಲಿಲ್ಲ. ಹೀಗಾಗಿ ಅಲ್ಪ ಮೊತ್ತಕ್ಕೆ ಆಸಿಸ್ ವಿರುದ್ಧ ಮಂಡಿಯೂರಿತು.
ಆಸಿಸ್ ಪರ ಬೌಲಿಂಗ್ನಲ್ಲಿ ಜಾದೂ ಮಾಡಿದ ಆ್ಯಡಂ ಜಂಪಾ 4 ವಿಕೆಟ್ ಕಬಳಿಸಿ ಗಮನ ಸೆಳೆದರು. ಉಳಿದಂತೆ ಮಿಚೆಲ್ ಮಾರ್ಷ್ 2 ವಿಕೆಟ್ ಪಡೆದರೆ, ಪ್ಯಾಟ್ ಕ್ಯುಮಿನ್ಸ್, ಜೋಶ್ ಹಜಾಲ್ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆದರು. (ಏಜೆನ್ಸೀಸ್)