ಭಾರತ ಮಹಿಳಾ ತಂಡಕ್ಕೆ ಜಯ: ಮಹಿಳೆಯರ ಟಿ20 ವಿಶ್ವಕಪ್, ಅಭ್ಯಾಸ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ರೋಚಕ ಗೆಲುವು

India
Published on

ಬ್ರಿಸ್ಬೇನ್: ಅಂತಿಮ ಓವರ್​ನಲ್ಲಿ ಪೂನಂ ಯಾದವ್ (20ಕ್ಕೆ 3) ತೋರಿದ ಕೈಚಳಕದ ಫಲವಾಗಿ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ರೋಚಕ ಜಯ ದಾಖಲಿಸಿತು. ಕಡೇ ಓವರ್​ನಲ್ಲಿ 11 ರನ್ ರಕ್ಷಿಸಿಕೊಂಡ ಪೂನಂ ಯಾದವ್ ತಂಡಕ್ಕೆ 2 ರನ್ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ತಂಡ ಶುಕ್ರವಾರದಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ಧತೆ ಕೈಗೊಂಡಿತು. ಪಾಕಿಸ್ತಾನ ತಂಡದ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಆಲನ್ ಬಾರ್ಡರ್ ಫೀಲ್ಡ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್​ಗೆ 107 ರನ್​ಗಳಿಸಿದರೆ, ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡ 7 ವಿಕೆಟ್​ಗೆ 105 ರನ್ ಗಳಿಸಷ್ಟೇ ಶಕ್ತವಾಯಿತು. ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

13ನೇ ಓವರ್​ವರೆಗೂ ಉತ್ತಮ ಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ದೀಪ್ತಿ ಶರ್ಮ ಆಘಾತ ನೀಡಿದರು. ಈ ಹಂತದಲ್ಲಿ ವಿಂಡೀಸ್ 1 ವಿಕೆಟ್​ಗೆ 57 ರನ್ ಕಲೆಹಾಕಿತ್ತು. ಆರಂಭಿಕ ಆಟಗಾರ್ತಿ ಲೀ ಅನ್ ರ್ಕಿಬಿ (42) ನಿರ್ಗಮನದೊಂದಿಗೆ ವೆಸ್ಟ್ ಇಂಡೀಸ್ ತಂಡದ ಪತನ ಆರಂಭಗೊಂಡಿತು. ಹ್ಯಾಲೀ ಮ್ಯಾಥ್ಯೂಸ್ (25) ಹಾಗೂ ಚಿನೆಲ್ಲೆ ಹೆನ್ರಿ (17) ಜೋಡಿ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಎಸೆದ 19ನೇ ಓವರ್​ನಲ್ಲಿ 3 ಬೌಂಡರಿ, 1 ಸಿಕ್ಸರ್ ಸೇರಿದಂತೆ 19 ರನ್ ಕಲೆಹಾಕಿತು. ಪೂನಂ ಯಾದವ್ ಎಸೆದ ಅಂತಿಮ ಓವರ್ ಮೊದಲ ಎರಡು ಎಸೆತದಲ್ಲಿ ಹೆನ್ರಿ ಕ್ರಮವಾಗಿ 2 ಹಾಗೂ ಬೌಂಡರಿ ಸಿಡಿಸಿ, 3ನೇ ಎಸೆತದಲ್ಲಿ ಸಿಂಗಲ್ ತೆಗೆದರು. ಆದರೆ, 4ನೇ ಎಸೆತದಲ್ಲಿ ಮ್ಯಾಥ್ಯೂಸ್, ತಾನಿಯಾ ಭಾಟಿಯಾಗೆ ಕ್ಯಾಚ್ ನೀಡಿದರು. 5ನೇ ಎಸೆತದಲ್ಲಿ ಶೇಮೈನ್ ಕ್ಯಾಂಬೆಲ್ (1) ಸಿಂಗಲ್ಸ್ ತೆಗೆದರು. ಕಡೇ ಎಸೆತದಲ್ಲಿ ವಿಂಡೀಸ್ ಗೆಲುವಿಗೆ 3 ರನ್ ಅವಶ್ಯಕತೆಯಿತ್ತು. ದೊಡ್ಡ ಹೊಡೆತಕ್ಕೆ ಮುಂದಾದ ಹೆನ್ರಿ ಕನ್ನಡತಿ ವೇದಾ ಕೃಷ್ಣಮೂರ್ತಿಗೆ ಕ್ಯಾಚ್ ನೀಡಿದರು.

ದಿನದ ಇನ್ನೆರಡು ಅಭ್ಯಾಸ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಆತಿಥೇಯ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಗೆಲುವು ದಾಖಲಿಸಿದವು. ಆಸ್ಟ್ರೇಲಿಯಾ ತಂಡ 4 ವಿಕೆಟ್​ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 6 ವಿಕೆಟ್​ಗೆ 147 ರನ್ ಪೇರಿಸಿದರೆ, ಆಸ್ಟ್ರೇಲಿಯಾ 19.3 ಓವರ್​ಗಳಲ್ಲಿ 6 ವಿಕೆಟ್​ಗೆ 150 ರನ್ ಬಾರಿಸಿ ಗೆಲುವು ಕಂಡಿತು. ಅಡಿಲೇಡ್​ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 10 ವಿಕೆಟ್​ಗಳಿಂದ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಗೆಲುವು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 9 ವಿಕೆಟ್​ಗೆ 122 ರನ್ ಪೇರಿಸಿದರೆ, ಶ್ರೀಲಂಕಾ 12.3 ಓವರ್​ಗಳಲ್ಲಿ ವಿಕೆಟ್​ನಷ್ಟವಿಲ್ಲದೆ 123 ರನ್ ಬಾರಿಸಿ ಗೆಲುವು ಕಂಡಿತು. ಬುಧವಾರ ಅಭ್ಯಾಸ ಪಂದ್ಯದ ಅಂತಿಮ ದಿನವಾಗಿದ್ದು, ನ್ಯೂಜಿಲೆಂಡ್-ಥಾಯ್ಲೆಂಡ್ ಹಾಗೂ ಬಾಂಗ್ಲಾದೇಶ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಅಲ್ಪಮೊತ್ತಕ್ಕೆ ಕುಸಿದ ಭಾರತ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ವಿಂಡೀಸ್ ಬೌಲರ್​ಗಳು ಆಘಾತ ನೀಡಿದರು. ಆರಂಭಿಕರ ವೈಫಲ್ಯದಿಂದ 3.1 ಓವರ್​ಗಳಲ್ಲಿ 3 ವಿಕೆಟ್​ಗೆ 17 ರನ್ ಪೇರಿಸಿದ್ದ ಭಾರತ ತಂಡ ಆರಂಭಿಕ ಶಾಕ್ ಎದುರಿಸಿತು. ಅನುಭವಿ ಬ್ಯಾಟುಗಾರ್ತಿಯರಾದ ನಾಯಕಿ ಹರ್ವನ್​ಪ್ರೀತ್ ಕೌರ್ (11) ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ (5) ನಿರಾಸೆ ಅನುಭವಿಸಿದರು. ಅಂತಿಮ ಹಂತದಲ್ಲಿ ದೀಪ್ತಿ ಶರ್ಮ (21ರನ್), ಶಿಖಾ ಪಾಂಡೆ (24* ರನ್, 16 ಎಸೆತ, 3 ಬೌಂಡರಿ, 1 ಸಿಕ್ಸರ್) ತೋರಿದ ಬಿರುಸಿನ ಬ್ಯಾಟಿಂಗ್ ಫಲವಾಗಿ ತಂಡದ ಮೊತ್ತ 100ರ ಗಡಿ ದಾಟಿತು.

ಭಾರತ: 8 ವಿಕೆಟ್​ಗೆ 107 (ಶಫಾಲಿ ವರ್ಮ 12, ದೀಪ್ತಿ ಶರ್ಮ 21, ಶಿಖಾ ಪಾಂಡೆ 24*, ಅನಿಸಾ ಮೊಹಮದ್ 16ಕ್ಕೆ 2, ಶಮಿಲಿಯಾ ಕೊನ್ನೆಲ್ 20ಕ್ಕೆ 2), ವೆಸ್ಟ್ ಇಂಡೀಸ್: 7 ವಿಕೆಟ್​ಗೆ 105 (ಲೀ ಆನ್ ರ್ಕಿಬಿ 42, ಹ್ಯಾಲೀ ಮ್ಯಾಥ್ಯೂಸ್ 25, ಚಿನೆಲ್ಲೆ ಹೆನ್ರಿ 17, ಪೂನಂ ಯಾದವ್ 20ಕ್ಕೆ 3, ಶಿಖಾ ಪಾಂಡೆ 18ಕ್ಕೆ 1, ದೀಪ್ತಿ ಶರ್ಮ 12ಕ್ಕೆ 1, ಹರ್ವನ್​ಪ್ರೀತ್ ಕೌರ್ 15ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net