ಭಾರತ ವಿರುದ್ಧದ ಸೋಲಿಗೆ ನೆಪ ಹೇಳಿ ಟ್ರೋಲಾದ ಆಸೀಸ್ ನಾಯಕ ಟಿಮ್ ಪೇನ್!

E1Ptvk-VUAArZxu
Published on

ಮೆಲ್ಬೋರ್ನ್/ನವದೆಹಲಿ: ಭಾರತ ತಂಡ ಕಳೆದ ವರ್ಷಾಂತ್ಯ ಮತ್ತು ಈ ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿತ್ತು. ನಾಯಕ ವಿರಾಟ್ ಕೊಹ್ಲಿ ಸಹಿತ ಪ್ರಮುಖ ಆಟಗಾರರ ಗೈರಿನಲ್ಲೂ ಹೊಸ ಆಟಗಾರರ ಅಮೋಘ ನಿರ್ವಹಣೆಯ ಬಲದಿಂದ ಭಾರತ ತಂಡ ಈ ಸಾಧನೆ ಮಾಡಿತ್ತು. ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ಇದೀಗ ಆ ಸೋಲಿಗೆ ನೀಡಿರುವ ವಿಚಿತ್ರ ನೆಪದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಂದ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.

ಪ್ರವಾಸದ ವೇಳೆ ಭಾರತ ತಂಡ ಕರೊನಾ ಭೀತಿಯಿಂದಾಗಿ ಬ್ರಿಸ್ಬೇನ್‌ಗೆ ಹೋಗುವುದಿಲ್ಲ ಎಂದು ಹೇಳಿ ಸೈಡ್‌ಶೋ ಪ್ರದರ್ಶಿಸಿತು. ಇದರಿಂದಾಗಿ ನಮ್ಮ ತಂಡದ ಏಕಾಗ್ರತೆ ಭಂಗ ಉಂಟಾಯಿತು ಎಂದು ಟಿಮ್ ಪೇನ್ ಸೋಲಿಗೆ ನೆಪ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪೇನ್ ವಿರುದ್ಧ ವಿವಿಧ ಜೋಕ್‌ಗಳನ್ನು ಮಾಡುವ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಾಲೆಳೆದಿದ್ದಾರೆ.

‘ಭಾರತ ವಿರುದ್ಧದ ಸರಣಿ ಅತ್ಯಂತ ಸವಾಲಿನಿಂದ ಕೂಡಿತ್ತು. ಯಾಕೆಂದರೆ ಅವರು ಕ್ಷುಲ್ಲಕ ಕಾರಣಗಳನ್ನು ನೀಡಿ ನಮ್ಮ ಗಮನವನ್ನು ಬೇರೆಡೆ ಸೆಳೆಯುವಲ್ಲಿ ನಿಪುಣರಾಗಿದ್ದರು. ಸರಣಿಗೆ ಪ್ರಮುಖವಾಗಿರದ ವಿಷಯಗಳ ಬಗ್ಗೆ ಅವರು ಮಾತನಾಡುತ್ತಿದ್ದರು. ಇದರಿಂದಾಗಿ ನಮ್ಮ ಏಕಾಗ್ರತೆಯಲ್ಲಿ ಭಂಗ ಉಂಟಾಗಿ ಅವರ ಬಲೆಗೆ ಬಿದ್ದೆವು. ಗಾಬಾಗೆ ಹೋಗುವುದಿಲ್ಲ ಎಂದು ಅವರು ಹೇಳಿದ್ದು ಇದಕ್ಕೊಂದು ಉತ್ತಮ ಉದಾಹರಣೆ. ಅಂಥ ಸೈಡ್‌ಶೋ ಸೃಷ್ಟಿಸುವುದರಲ್ಲಿ ಅವರು ಉತ್ತಮವೆನಿಸಿದ್ದರು. ಆ ವೇಳೆ ನಾವು ನಮ್ಮ ಕಣ್ಣನ್ನು ಚೆಂಡಿನಿಂದ ಬೇರೆಡೆಗೆ ಸರಿಸಿದ್ದೆವು’ ಎಂದು ಪೇನ್ ಹೇಳಿದ್ದರು.

ಈ ಹೇಳಿಕೆಯ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಪ್ರೇಮಿಗಳು ಪೇನ್ ಬಗ್ಗೆ ವಿವಿಧ ಮೀಮ್ಸ್‌ಗಳನ್ನು ಮಾಡಿದ್ದು, ಅದರ ಜತೆಯಲ್ಲೇ ಟಿಮ್ ಪೇನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದ್ದರು. ಭಾರತ ತಂಡ ಪ್ರವಾಸದಲ್ಲಿ ಬ್ರಿಸ್ಬೇನ್ ಟೆಸ್ಟ್‌ನಲ್ಲೂ ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಮೂಲಕ ಬ್ರಿಸ್ಬೇನ್‌ನಲ್ಲಿ 32 ವರ್ಷಗಳ ಬಳಿಕ ಆಸ್ಟ್ರೇಲಿಯಾಕ್ಕೆ ಸೋಲುಣಿಸಿದ ಪ್ರವಾಸಿ ತಂಡವೆನಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net