

ಮೆಲ್ಬೋರ್ನ್: ಯುಎಇಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದ್ದು, ವಿಕೆಟ್ ಕೀಪರ್ ಜೋಶ್ ಇನ್‌ಗ್ಲಿಸ್ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಹೊಸಮುಖವಾಗಿದ್ದಾರೆ. ಚೊಚ್ಚಲ ಟಿ20 ವಿಶ್ವಕಪ್ ಜಯಿಸುವ ಮಹತ್ವಾಕಾಂಕ್ಷೆ ಹೊಂದಿರುವ ಆಸೀಸ್ ತನ್ನ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುತ್ತಿದೆ.
ಇತ್ತೀಚೆಗೆ ಮೊಣಕಾಲು ಶಸಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿರುವ ಆರನ್ ಫಿಂಚ್ ತಂಡದ ನಾಯಕರಾಗಿ ಮುಂದುವರಿದಿದ್ದಾರೆ. ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೋಯಿನಿಸ್ ತಂಡದಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ. ಆಡಂ ಜಂಪಾ ಮತ್ತು ಆಶ್ಟನ್ ಅಗರ್ ಜತೆಗೆ ಮಿಚೆಲ್ ಸ್ವೀಪ್‌ಸನ್ ತಂಡದಲ್ಲಿರುವ 3ನೇ ಸ್ಪಿನ್ನರ್ ಆಗಿದ್ದಾರೆ. 26 ವರ್ಷದ ಇನ್‌ಗ್ಲಿಸ್ 2020-21ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ತೋರಿದ ಅಮೋಘ ನಿರ್ವಹಣೆಯಿಂದ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಪ್ರವೇಶ ಪಡೆದಿದ್ದಾರೆ. ಆದರೆ ಮ್ಯಾಥ್ಯೂ ವೇಟ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರುತ್ತಾರೆ. ಅಲೆಕ್ಸ್ ಕ್ಯಾರಿ ಮತ್ತು ಜೋಶ್ ಫಿಲಿಪ್ ಅವರನ್ನು ಹಿಂದಿಕ್ಕಿ ಇನ್‌ಗ್ಲಿಸ್ ಮೀಸಲು ಕೀಪರ್ ಸ್ಥಾನ ಸಂಪಾದಿಸಿದ್ದಾರೆ.
ಮೂವರು ಮೀಸಲು ಆಟಗಾರರ ಸಹಿತ ವಿಶ್ವಕಪ್‌ಗೆ ಆಯ್ಕೆಯಾಗಿರುವ ಒಟ್ಟು 18 ಆಟಗಾರರ ಪೈಕಿ 11 ಆಟಗಾರರು ಐಪಿಎಲ್ ತಂಡಗಳ ಜತೆಗೆ ಒಪ್ಪಂದ ಹೊಂದಿದ್ದಾರೆ. ಈ ಪೈಕಿ ಪ್ಯಾಟ್ ಕಮ್ಮಿನ್ಸ್ ಮಾತ್ರ ಮೊದಲ ಮಗುವಿನ ನಿರೀಕ್ಷೆಯಲ್ಲಿ ಐಪಿಎಲ್ 2ನೇ ಭಾಗದಿಂದ ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯಾ ತಂಡ ಅಕ್ಟೋಬರ್ 23ರಂದು ನಡೆಯಲಿರುವ ಸೂಪರ್-12ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ತಂಡ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್, ಆಶ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್, ಆಡಂ ಜಂಪಾ, ಜೋಶ್ ಹ್ಯಾಸಲ್‌ವುಡ್, ಮಾರ್ಕಸ್ ಸ್ಟೋಯಿನಿಸ್, ಮಿಚೆಲ್ ಸ್ವೀಪ್‌ಸನ್, ಜೋಶ್ ಇನ್‌ಗ್ಲಿಸ್.
ಮೀಸಲು ಆಟಗಾರರು: ಡೇನಿಯಲ್ ಕ್ರಿಶ್ಚಿಯನ್, ನಾಥನ್ ಎಲ್ಲಿಸ್, ಡೇನಿಯಲ್ ಸ್ಯಾಮ್ಸ್.
ಸೆಪ್ಟೆಂಬರ್ 10ರವರೆಗೆ ಗಡುವು
ಸೆಪ್ಟೆಂಬರ್ 17ರಿಂದ ನಡೆಯಲಿರುವ ಟಿ20 ವಿಶ್ವಕಪ್‌ಗೆ 15 ಆಟಗಾರರ ಅಂತಿಮ ತಂಡವನ್ನು ಪ್ರಕಟಿಸಲು ಐಸಿಸಿ ಸೆಪ್ಟೆಂಬರ್ 10ರ ಗುಡುವು ನೀಡಿದೆ. ಆದರೆ, ಆಟಗಾರರು ಯುಎಇಯಲ್ಲಿ ಕ್ವಾರಂಟೈನ್‌ಗೆ ಒಳಗಾಗುವುದಕ್ಕೆ 5 ದಿನ ಮುನ್ನ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಕೂಡ ಅವಕಾಶ ನೀಡಲಾಗಿದೆ. ಭಾರತದಲ್ಲಿ ನಿಗದಿಯಾಗಿದ್ದ ವಿಶ್ವಕಪ್ ಟೂರ್ನಿಯನ್ನು ಕರೊನಾ 3ನೇ ಅಲೆಯ ಭೀತಿಯಿಂದಾಗಿ ಅರಬ್ ದೇಶಕ್ಕೆ ಸ್ಥಳಾಂತರಿಸಲಾಗಿದೆ.