

ಅಡಿಲೇಡ್: ಕಾಂಗರೂ ಪ್ರವಾಸದಲ್ಲಿ ಶುಭಾರಂಭದ ಬಳಿಕ ನೀರಸ ನಿರ್ವಹಣೆ ತೋರಿದ ಪ್ರವಾಸಿ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಹಾಗೂ ಅಹರ್ನಿಶಿ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಪರಾಭವಗೊಂಡಿದೆ.
ನಾಯಕ ಪ್ಯಾಟ್ ಕಮ್ಮಿನ್ಸ್ (57ಕ್ಕೆ 5) ಮಾರಕ ದಾಳಿಯ ನೆರವಿನಿಂದ 3ನೇ ದಿನದಾಟದಲ್ಲಿ ಭಾರತ ತಂಡವನ್ನು ಬೇಗನೆ ಕಟ್ಟಿಹಾಕಿದ ಆತಿಥೇಯ ಆಸ್ಟ್ರೇಲಿಯಾ ತಂಡ ಎರಡೂವರೆ ದಿನಗಳಲ್ಲೇ ಗೆಲುವು ಒಲಿಸಿಕೊಂಡು ತಿರುಗೇಟು ನೀಡಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ. ಗೆಲುವಿನೊಂದಿಗೆ ಕಾಂಗರೂ ಪಡೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಮೂರನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ರೋಹಿತ್ ಶರ್ಮ ಸಾರಥ್ಯದಲ್ಲಿ ಸತತ 4ನೇ ಸೋಲಿಗೆ ತುತ್ತಾದ ಭಾರತ ತಂಡ 3ನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ ಸತತ 3ನೇ ಬಾರಿಗೆ ೈನಲ್‌ಗೇರುವ ಭಾರತದ ಹಾದಿಯೂ ದುರ್ಗಮಗೊಂಡಿದೆ.
ಅಡಿಲೇಡ್ ಓವಲ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 5 ವಿಕೆಟ್‌ಗೆ 125 ರನ್‌ಗಳಿಂದ ಭಾರತ 3ನೇ ದಿನದ ಆಟ ಆರಂಭಿಸಿತು. ವಿಕೆಟ್ ಕೀಪರ್-ರಿಷಭ್ ಪಂತ್ (28) ದಿನದ ಮೊದಲ ಓವರ್‌ನಲ್ಲೇ ಔಟ್ ಆಗುವುದರೊಂದಿಗೆ ಭಾರತ ಸೋಲಿನತ್ತ ಮುಖಮಾಡಿತು. ನಿತೀಶ್ ಕುಮಾರ್ ರೆಡ್ಡಿ (42) ಏಕಾಂಗಿ ಹೋರಾಟದಿಂದ ಭಾರತ ಇನಿಂಗ್ಸ್ ಸೋಲಿನಿಂದ ಪಾರಾದರೂ, ಅಂತಿಮವಾಗಿ 36.5 ಓವರ್‌ಗಳಲ್ಲಿ 175 ರನ್‌ಗಳಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ ಆಲೌಟ್ ಆಯಿತು. ಇದರಿಂದ ಗೆಲುವಿಗೆ ಕೇವಲ 19 ರನ್ ಗುರಿ ಪಡೆದ ಆಸೀಸ್ ತಂಡವನ್ನು ನಾಥನ್ ಮೆಕ್‌ಸ್ವೀನಿ (10*) ಹಾಗೂ ಉಸ್ಮಾನ್ ಖವಾಜ (9*) ಜೋಡಿ 3.2 ಓವರ್‌ಗಳಲ್ಲಿ ಟೀ ವಿರಾಮಕ್ಕೆ ಮುನ್ನವೇ ಯಶಸ್ವಿಯಾಗಿ ದಡ ಸೇರಿಸಿತು.
ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್‌ನಲ್ಲಿಯೇ 87.3 ಓವರ್ ಆಡಿದ್ದರೆ, ಭಾರತ ಎರಡೂ ಇನಿಂಗ್ಸ್‌ಗಳಲ್ಲಿ 81 ಓವರ್ ಮಾತ್ರ ಬ್ಯಾಟಿಂಗ್ ನಡೆಸಿತು. ಸರಣಿಯ ಮುಂದಿನ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದು, ತನ್ನ ಹಿಂದಿನ ಆಸೀಸ್ ಪ್ರವಾಸದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ಭಾರತ, ಹಿಂದಿನ ಮ್ಯಾಜಿಕ್‌ಅನ್ನು ಪುನರಾವರ್ತಿಸುವುದೇ ಎಂಬುದು ಕುತೂಹಲ ಮೂಡಿಸಿದೆ.
ಅತಿಚಿಕ್ಕ ಪಂದ್ಯ
ಇದು ಭಾರತ-ಆಸೀಸ್ ನಡುವಿನ ಟೆಸ್ಟ್‌ಗಳ ಪೈಕಿ ಅತಿ ಕಡಿಮೆ ಎಸೆತಗಳಲ್ಲಿ ಸ್ಪಷ್ಟ ಲಿತಾಂಶ ಕಂಡ ಪಂದ್ಯವೆನಿಸಿದೆ. 1,031 ಎಸೆತಗಳಲ್ಲೇ ಪಂದ್ಯ ಮುಗಿಯಿತು. ಈ ಮುನ್ನ 2023ರ ಇಂದೋರ್ ಟೆಸ್ಟ್ 1,135 ಎಸೆತಗಳಲ್ಲಿ ಮುಗಿದು ಅತಿಚಿಕ್ಕ ಪಂದ್ಯವೆನಿಸಿತ್ತು.
4: ಇದು ಆಸೀಸ್ ನೆಲದಲ್ಲಿ (1,031) 4ನೇ ಅತಿ ಕಡಿಮೆ ಎಸೆತಗಳಲ್ಲಿ ಮುಕ್ತಾಯಗೊಂಡ ಪಂದ್ಯ ಎನಿಸಿತು. ಆಸೀಸ್-ದ.ಆಫ್ರಿಕಾ (656), ಆಸ್ಟ್ರೇಲಿಯಾ-ದ.ಆಫ್ರಿಕಾ (866) ಹಾಗೂ ಆಸ್ಟ್ರೇಲಿಯಾ-ಇಂಗ್ಲೆಂಡ್ (911) ಮೊದಲ ಮೂರು ಪಂದ್ಯಗಳು.