ಆಸ್ಟ್ರೇಲಿಯಾ ಎದುರು ಏಕದಿನ ಸರಣಿಯಲ್ಲಿ ಸಮಬಲ ಸಾಧಿಸಿದ ಆಂಗ್ಲರು: ದುಬಾರಿಯಾದ ಸ್ಟಾರ್ಕ್

New-Project-19
Published on

ಲಂಡನ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಇಂಗ್ಲೆಂಡ್ ತಂಡ ಮಳೆಬಾಧಿತ 4ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 186 ರನ್‌ಗಳ ಭಾರಿ ಅಂತರದ ಗೆಲುವು ದಾಖಲಿಸಿದೆ. ಇದರೊಂದಿಗೆ ಹ್ಯಾರಿ ಬ್ರೂಕ್ ಪಡೆ ಐದು ಪಂದ್ಯಗಳ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ. ಐದನೇ ಹಾಗೂ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.

ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಣದಲ್ಲಿ ಶುಕ್ರವಾರ ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯವನ್ನು ತಲಾ 39 ಓವರ್‌ಗಳಿಗೆ ಇಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್‌ಗೆ ಆರಂಭಿಕ ಬೆನ್ ಡಕೆಟ್ (63 ರನ್, 62 ಎಸೆತ, 6 ಬೌಂಡರಿ, 1 ಸಿಕ್ಸರ್) ಉತ್ತಮ ಆರಂಭ ಒದಗಿಸಿದರು. ಬಳಿಕ ಹ್ಯಾರಿ ಬ್ರೂಕ್ (87 ರನ್, 58 ಎಸೆತ, 11 ಬೌಂಡರಿ,1 ಸಿಕ್ಸರ್) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (62* ರನ್, 27 ಎಸೆತ, 3 ಬೌಂಡರಿ, 7 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 39 ಓವರ್‌ಗಳಲ್ಲಿ 5 ವಿಕೆಟ್‌ಗೆ 312 ರನ್ ಸವಾಲಿನ ಮೊತ್ತ ಪೇರಿಸಿತು. ಮಿಚೆಲ್ ಸ್ಟಾರ್ಕ್ ಎಸೆದ ಕೊನೇ ಓವರ್‌ನಲ್ಲಿ ಲಿವಿಂಗ್‌ಸ್ಟೋನ್ ಬರೋಬ್ಬರಿ 4 ಸಿಕ್ಸರ್ ಸಹಿತ 28 ರನ್ ಕಸಿದರು.

ಪ್ರತಿಯಾಗಿ ಚೇಸಿಂಗ್‌ನಲ್ಲಿ 1 ವಿಕೆಟ್‌ಗೆ 68 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ, ಯುವ ವೇಗಿ ಮ್ಯಾಥ್ಯೂ ಪಾಟ್ಸ್ (38ಕ್ಕೆ 4) ಸಹಿತ ಬೌಲರ್‌ಗಳ ಸಂಘಟಿತ ದಾಳಿಗೆ ಲಯ ತಪ್ಪಿ 24.4 ಓವರ್‌ಗಳಲ್ಲಿ 126 ರನ್‌ಗಳಿಗೆ ಸರ್ವಪತನ ಕಂಡಿತು.

ಇಂಗ್ಲೆಂಡ್: 39 ಓವರ್‌ಗಳಲ್ಲಿ 5 ವಿಕೆಟ್‌ಗೆ 314 (ಸಾಲ್ಟ್ 22, ಡಕೆಟ್ 62, ವಿಲ್ ಜಾಕ್ಸ್ 10, ಬ್ರೂಕ್ 87, ಜೆ. ಸ್ಮಿತ್ 39, ಲಿವಿಂಗ್‌ಸ್ಟೋನ್ 32, ಬೆತೆಲ್ 12, ಜಂಪಾ 66ಕ್ಕೆ 2).
ಆಸೀಸ್: 24.4 ಓವರ್‌ಗಳಲ್ಲಿ 126 (ಮಾರ್ಷ್ 28, ಟ್ರಾವಿಸ್ ಹೆಡ್ 34, ಸ್ಮಿತ್ 5, ಲಬುಶೇನ್ 4, ಮ್ಯಾಕ್ಸ್‌ವೆಲ್ 2, ಅಬಾಟ್ 10, ಪಾಟ್ಸ್ 38ಕ್ಕೆ 4, ಬ್ರೈಡನ್ ಕಾರ್ಸ್ 36ಕ್ಕೆ 3). ಪಂದ್ಯಶ್ರೇಷ್ಠ: ಹ್ಯಾರಿ ಬ್ರೂಕ್.

28: ಮಿಚೆಲ್ ಸ್ಟಾರ್ಕ್ ಏಕದಿನ ಕ್ರಿಕೆಟ್‌ನ ಒಂದೇ ಓವರ್‌ನಲ್ಲಿ ಗರಿಷ್ಠ ರನ್ ಬಿಟ್ಟುಕೊಟ್ಟ ಆಸೀಸ್ ಬೌಲರ್ ಎಂಬ ಬೇಡದ ದಾಖಲೆ ಬರೆದರು. ಕ್ಸೆವಿಯರ್ ಡೊಹರ್ಟಿ 26 ರನ್ ನೀಡಿದ್ದು ಹಿಂದಿನ ಗರಿಷ್ಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net