

ಕಳೆದ ಎರಡು ದಿನಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದರ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಗಳನ್ನು ಆಡಲು ಅನುಮತಿ ನೀಡುವುದಿಲ್ಲ ಎಂದು ತಾಲಿಬಾನ್ ಈಗಾಗಲೇ ನಿಯಮ ಹೊರಡಿಸಿದೆ. ಈ ನಿಯಮದ ವಿರುದ್ಧವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ತಾಲಿಬಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಒಂದು ವೇಳೆ ತಾಲಿಬಾನ್ ಮಹಿಳಾ ಕ್ರಿಕೆಟ್ ನಿಷೇಧ ಮಾಡಿದ್ರೆ, ನಾವು ಅಫ್ಘಾನಿಸ್ತಾನ ಪುರುಷ ತಂಡದೊಂದಿಗೆ ನಡೆಯಬೇಕಿರುವ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದಲ್ಲೂ ಭಾಗಿಯಾಗುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.
ಈ ಕುರಿತಾಗಿ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಜಾಗತಿಕವಾಗಿ ಮಹಿಳೆಯರು ಎಲ್ಲ ವಿಭಾಗಗಳಲ್ಲೂ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಕ್ರಿಕೆಟ್ ಸೇರಿದಂತೆ ಎಲ್ಲ ವಿಭಾಗದ ಕ್ರೀಡೆಗಳಲ್ಲಿ ಅವರನ್ನು ಬೆಂಬಲಿಸುವುದು ಆಸ್ಟ್ರೇಲಿಯಾದ ಆದ್ಯ ಕರ್ತವ್ಯ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಮಹಿಳಾ ಕ್ರಿಕೆಟ್ಗೆ ನಿಷೇಧ ಹೇರಿದರೆ, ನಾವು ಅಫ್ಘಾನಿಸ್ತಾನ ಪುರುಷ ತಂಡದೊಂದಿಗೆ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ. ಈ ಟೆಸ್ಟ್ ಪಂದ್ಯ ರದ್ದುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ನವೆಂಬರ್ ತಿಂಗಳಲ್ಲಿ ಅಫ್ಘಾನಿಸ್ತಾನದೊಂದಿಗೆ ಹೋಬರ್ಟ್ನಲ್ಲಿ ಆಸ್ಟ್ರೇಲಿಯಾ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯ ಆಯೋಜಿಸಿದೆ.